ಫಲಾನುಭವಿಗೆ 15 ಪೈಸೆಯೂ ತಲುಪುತ್ತಿಲ್ಲ: ನ್ಯಾ. ಹೆಗ್ಡೆ
ಮಂಗಳೂರು: ಸರ್ಕಾರಿ ಯೋಜನೆಗಳಲ್ಲಿ ಕೊನೆಯ ಫಲಾನುಭವಿ ವ್ಯಕ್ತಿಗೆ ತಲುಪುವುದು ಕೇವಲ 15 ಪೈಸೆ ಎಂದು ಮಾಜಿ ಪ್ರಧಾನಿ ರಾಜೀವ್ಗಾಂಧಿ ಆಗ ಹೇಳುತ್ತಿದ್ದು ಸತ್ಯ, ಈಗ ಫಲಾನುಭವಿಗೆ 15 ಪೈಸೆಯೂ ತಲುಪುವುದಿಲ್ಲ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಖೇದ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಸಮಾರೋಪದಲ್ಲಿ ಶನಿವಾರ ಯುವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 2013-14ರಲ್ಲಿ ರಾಜ್ಯದ ಬಜೆಟ್ ರು. 1.32 ಲಕ್ಷಕೋಟಿ ಆಗಿದ್ದು, ಇದೇ ಪ್ರಮಾಣದಲ್ಲಿ ದೇಶದಲ್ಲಿ ಒಂದೊಂದು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಳಕಳಿ ವ್ಯಕ್ತಪಡಿಸಿದರು. ಬೆಂಗಳೂರಿನ ಹ್ಯೂಮನ್ ನೆಟ್ವರ್ಕಿಂಗ್ ಅಕಾಡೆಮಿ ನಿರ್ದೇಶಕ ಪ್ರೊ.ಕೆ.ರಘೂತ್ತಮ ರಾವ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ರಾಮಕೃಷ್ಣ ಮಠ ಅಧ್ಯಕ್ಷ ಸ್ವಾಮಿ ಜಿತಕಾಮನಂದಜಿ ಅಧ್ಯಕ್ಷತೆ ವಹಿಸಿದ್ದರು.