ಮಹಿಳಾ ಆಯೋಗ ಅಧ್ಯಕ್ಷರ ನೇಮಿಸದ ಅಸಂವೇದಿ ಸರ್ಕಾರ'
ಮಂಗಳೂರು: ಮಹಿಳೆಯರ ಮೇಲೆ ಇಷ್ಟೆಲ್ಲ ದೌರ್ಜನ್ಯ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಮಹಿಳಾ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸದೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಸಂವೇದಿಯಾಗಿ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡೆ ತೇಜಸ್ವಿನಿ ರಮೇಶ್ ಆರೋಪಿಸಿದರು.
ಎಸ್ಡಿಎಂ ಕಾಲೇಜ್ನಲ್ಲಿ ಎಬಿವಿಪಿ ಆಯೋಜಿಸಿದ ಸುರಕ್ಷಿತ ಮಹಿಳೆ- ಸ್ವಾಸ್ಥ ಸಮಾಜ ವಿಚಾರ ಕುರಿತು ದುಂಡು ಮೇಜಿನ ಪರಿಷತ್ ನಲ್ಲಿ ಭಾಗವಹಿಸಿ ಮಾತನಾಡಿದರು. ಏನೂ ಮಾಡಿದರೂ ನಡೆಯುತ್ತದೆ ಎಂಬ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಮಹಿಳೆಯರಿಗೆ ರಕ್ಷಣೆ ನೀಡುವುದು ಭಿಕ್ಷೆ ಅಲ್ಲ, ಅದು ನಮ್ಮ ಹಕ್ಕು ಎಂದರು. ಮಣಿಪಾಲದಲ್ಲಿ ಅತ್ಯಾಚಾರ ಪ್ರಕರಣ ವೇಳೆ ಪೊಲೀಸ್ ಇಲಾಖೆ ಚುರುಕು ಮುಟ್ಟಿಸಲು ಗೃಹಸಚಿವರೇ ಆಗಮಿಸಿದ್ದರು. ಆದರೂ ಇಂಥ ಪ್ರಕರಣಗಳು ನಡೆಯುತ್ತಲೇ ಇದೆ. ಇದರ ಅರ್ಥ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ ಎಂದರು.
ಸರ್ಕಾರವೇ ಕಾರಣ: ಮಹಿಳಾ ಆಯೋಗ ಮಾಜಿ ಅಧ್ಯಕ್ಷೆ ಮಂಜುಳಾ ಮಾತನಾಡಿ, ಆಡಳಿತ ವ್ಯವಸ್ಥೆ ಶಾಮೀಲು ಅಥವಾ ನಿಷ್ಕ್ರಿಯತೆ ಕಾರಣವಾಗಿರಬಹುದು. ಸರ್ಕಾರ ಮಾಫಿಯಾಗಳ ಸೊಂಟ ಮುರಿಯದೆ ಇರುವ ಕಾರಣ ಜನರೇ ಕಾನೂನು ಕೈಗೆತ್ತಿಕೊಳ್ಳುವ ದುಃಸ್ಥಿತಿ ಉಂಟಾಗಿದೆ. ಸಮುದಾಯಗಳ ನಡುವೆ ಅಪನಂಬಿಕೆ ಉಂಟಾಗಿದೆ. ಸ್ನೇಹಿತೆಯರ ಜತೆ ಮಾತನಾಡದೇ ಇರುವ ಸ್ಥಿತಿ ಉಂಟಾಗಿದೆ.
ಮೈಸೂರು ವಿವಿ ಸಂಶೋಧನೆ ವಿದ್ಯಾರ್ಥಿಗಳ ತಂಡ ಮಾಡಿರುವ ನಾಪತ್ತೆಯಾದ ಹೆಣ್ಣುಮಕ್ಕಳ ಕುರಿತ ವರದಿಯನ್ನು ರಾಜ್ಯ ಮಹಿಳಾ ಆಯೋಗ ವರದಿ ಮಾಡಿದೆ. ಇದನ್ನು ಪರಿಶೀಲಿಸಿ ಸರ್ಕಾರ ಸೂಕ್ತ ಕ್ರಮ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಮಾಜ ಶಾಸ್ತ್ರಜ್ಞ ಚ.ನ. ಶಂಕರರಾವ್ ಮಾತನಾಡಿ, ಸ್ಥಿತಿವಂತ ವಿದ್ಯಾರ್ಥಿನಿಯರು ಪೊಲಿ ಹುಡುಗರ ಜಾಲಕ್ಕೆ ಬಲಿಯಾಗಿದ್ದಾರೆ. ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ಗಮನ ಸೆಳೆದು ಗೆಳೆತನ ಬೆಳೆಸಿ, ಬಲೆಗೆ ಬೀಳಿಸುತ್ತಾರೆ. ಹುಡುಗಿಯರ ಪರವಾಗಿ ಮಾತನಾಡಿದರೆ ಯಾರೂ ಬೆಂಬಲಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಹದಿ, ಹರೆಯದ ವಿದ್ಯಾರ್ಥಿನಿಯರಿಗೆ ಮೋಸ ಜಾಲದ ಬಗ್ಗೆ ಮನ ಮಟ್ಟುವಂತೆ ಶಾಲೆ, ಕಾಲೇಜ್ಗಳಲ್ಲಿ ಪ್ರಾಧ್ಯಾಪಕರು ತಿಳಿ ಹೇಳುವ ಅಗತ್ಯ ಇದೆ ಎಂದರು. ಎಬಿವಿಪಿ ಮುಖಂಡರಾದ ರೋಹಿಣಾಕ್ಷ, ರಮೇಶ್ ಕೆ. ಇದ್ದರು.