ರಸ್ತೆ ಅಪಘಾತ; ವಿದ್ಯಾರ್ಥಿಗಳಿಬ್ಬರ ದುರ್ಮರಣ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದ ತಿರುವಿನ ರಸ್ತೆಯಲ್ಲಿ ಬೈಕ್ ಹಾಗೂ ಟೆಂಪೊ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಸ್ಥಳೀಯ ಕೆಎಸ್‌ಎಸ್ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿಗಳಾದ ಪಂಜ ಸಮೀಪದ ಪಂಬೆತ್ತಾಡಿ ಕುಂಞಣ್ಣ ಗೌಡರ ಪುತ್ರ ದೀಕ್ಷಿತ್(21) ಹಾಗೂ ಧನಂಜಯ ಎಂಬವರ ಪುತ್ರ ರಾಘವೇಂದ್ರ (21)
ಮೃತರು.
ಶನಿವಾರ ದೀಕ್ಷಿತ್ ತನ್ನ ಹೊಸ ಬೈಕ್ ಅನ್ನು ಸರ್ವೀಸ್‌ಗಾಗಿ ಕಡಬಕ್ಕೆ ತೆಗೆದುಕೊಂಡು ಹೋಗಿ ವಾಪಸ್ ಸುಬ್ರಹ್ಮಣ್ಯಕ್ಕೆ ಬರುವಾಗ ಮರ್ಧಾಳ ಎಂಬಲ್ಲಿ ತನ್ನ ಸಹಪಾಠಿ ರಾಘವೇಂದ್ರನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬರುತ್ತಿದ್ದ. ಕುಲ್ಕುಂದ ಸಮೀಪದ ತಿರುವಿನಲ್ಲಿ ಬೈಕ್ ಹಾಗೂ ಟೆಂಪೋ ಮುಖಾಮುಖಿ ಡಿಕ್ಕಿಯಾಗಿವೆ. ಶಿವಮೊಗ್ಗ ವಿಭಾಗದ ನೋಂದಣಿ ಹೊಂದಿದ್ದ ಟೆಂಪೋ ಶಬರಿಮಲೆ ಯಾತ್ರೆ ಮುಗಿಸಿ ಸುಬ್ರಹ್ಮಣ್ಯಕ್ಕೆ ಬಂದು ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬೈಕ್ ಹಾಗೂ ಟೆಂಪೋ ಪರಸ್ಪರ ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿದ್ದ ದೀಕ್ಷಿತ್ ಹಾಗೂ ರಾಘವೇಂದ್ರ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ. ಟೆಂಪೋ ಮುಂಭಾಗ ಹಾಗೂ ಬೈಕ್ ನಜ್ಜುಗುಜ್ಜಾಗಿದೆ. ಟೆಂಪೋ ಚಾಲಕ ಶಿವಮೊಗ್ಗದ ಈಶ್ವರ ಗೌಡ ಎಂಬವರ ಪುತ್ರ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಕೇಸು ದಾಖಲಿಸಿದ್ದಾರೆ.
ಕಾಲೇಜಿಗೆ ರಜೆ: ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಶನಿವಾರ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಘಟನಾ ಸ್ಥಳ ಹಾಗೂ ಕಡಬ ಆಸ್ಪತ್ರೆಗೆ ಭೇಟಿ ನೀಡಿದರು.
ನಾಪತ್ತೆಯಾದ 108 ಆ್ಯಂಬುಲೆನ್ಸ್: ಅಪಘಾತ ನಡೆದು ವಿದ್ಯಾರ್ಥಿಗಳಿಬ್ಬರು ಗಂಭೀರ ಗಾಯಗಳಾಗಿ ಜೀವನ್ಮರಣ ಹೋರಾಟದಲ್ಲಿದ್ದಾಗ್ಯೂ ಯಾರೂ ಸಹಾಯಕ್ಕೆ ಬಾರದೆ ಇದ್ದಾಗ ವಿದ್ಯಾರ್ಥಿಯೊಬ್ಬ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದಾಗ ಆ್ಯಂಬುಲೆನ್ಸ್ ಬರಲಿಲ್ಲ. ಬಳಿಕ ಖಾಸಗಿ ಜೀಪೊಂದರಲ್ಲಿ ಧೀರಜ್ ಎಂಬ ವಿದ್ಯಾರ್ಥಿ ಟೆಂಪೋದಲ್ಲಿದ್ದ ಅಯ್ಯಪ್ಪ ವ್ರತಧಾರಿಗಳ ಸಹಾಯದೊಂದಿಗೆ ಕಡಬ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಇಬ್ಬರು ಅಸುನೀಗಿದ್ದಾರೆ. ಘಟನೆ ನಡೆದ ತಕ್ಷಣ ಆ್ಯಂಬುಲೆನ್ಸ್ ಬರುತ್ತಿದ್ದರೆ ವಿದ್ಯಾರ್ಥಿಗಳ ಪ್ರಾಣ ಉಳಿಸಬಹುದಿತ್ತು ಎಂಬ ಅಭಿಪ್ರಾಯ ಸ್ಥಳೀಯರಿಂದ ಕೇಳಿ ಬಂತು.
ಸುಮಾರು ಒಂದು ತಿಂಗಳ ಹಿಂದೆ ಆ್ಯಂಬುಲೆನ್ಸ್ ಅಪಘಾತಕ್ಕೀಡಾಗಿ ರಿಪೇರಿಗೆ ಹೋಗಿದ್ದು ಇನ್ನೂ ವಾಪಸ್ ಸೇವೆಗೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು: ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ತಿಳಿದು ಅಪಘಾತ ಸಂಭವಿಸಿದ ಸ್ಥಳಕ್ಕೆ ಬಂದ ವಿದ್ಯಾರ್ಥಿಗಳು ಟೆಂಪೋವನ್ನು ತೆಗೆಯದಂತೆ ತಡೆಯೊಡ್ಡಿದರು. ಘಟನಾ ಸ್ಥಳದಲ್ಲಿ ಮಾರ್ಕಿಂಗ್ ಮಾಡದಿರುವ ಬಗ್ಗೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.