ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೆಎಚ್‌ಬಿ ಕಾಲೋನಿಗೆ ರಷ್ಯದವರ ಸ್ಥಳಾಂತರ?

Vishwanath S
Updated On : 13 Jan 2014, 12:43 pm

ಕಾರವಾರ: ವಿಕ್ರಮಾದಿತ್ಯ ಯುದ್ಧನೌಕೆ ಜೊತೆ ಬಂದ ರಷ್ಯನ್ ತಂತ್ರಜ್ಞರ ದುರ್ವರ್ತನೆ ಭಾನುವಾರವೂ ಮುಂದುವರೆಯಿತು. ಹಗಲಿನಲ್ಲಿ ಮದ್ಯವ್ಯಸನ ಹಾಗೂ ಅರೆನಗ್ನರಾಗಿ ತಿರುಗಾಡುತ್ತಿದ್ದ ರಷ್ಯನ್ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಹಾಗಾಗಿ ರಷ್ಯನ್‌ರ ವರ್ತನೆಗೆ ಕಡಿವಾಣ ಹಾಕಲು ಕೆಲವರನ್ನು ಇಲ್ಲಿನ ಕೆಎಚ್‌ಬಿ ಕಾಲೋನಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.
ಕಳೆದ ಮಂಗಳವಾರ ಕಾರವಾರದ ಸೀಬರ್ಡ್ ಯುದ್ಧನೌಕೆಗೆ ಆಗಮಿಸಿರುವ ವಿಕ್ರಮಾದಿತ್ಯ ಯುದ್ಧನೌಕೆ ತನ್ನ ಜೊತೆ 120ಕ್ಕೂ ಹೆಚ್ಚು ರಷ್ಯನ್ ತಂತ್ರಜ್ಞರನ್ನು ಕರೆತಂದಿದೆ. ಇವರು ಒಂದು ವರ್ಷ ಕಾರವಾರದಲ್ಲಿ ತಂಗಿ ಭಾರತೀಯ ಸೈನಿಕರಿಗೆ ವಿಕ್ರಮಾದಿತ್ಯನ ನಿರ್ವಹಣೆಯ ಬಗ್ಗೆ ಪೂರ್ಣ ಪಾಠ ಹೇಳಲಿದ್ದಾರೆ. ಹೀಗಾಗಿ ಇವರ ವಾಸ್ತ್ಯವ್ಯಕ್ಕಾಗಿ ಕಾರವಾರದ ಹೊಟೇಲ್ ಪ್ರೀಮಿಯರ್ ಹಾಗೂ ಸದಾಶಿವಗಡದ ಸ್ಟರ್ಲಿಂಗ್ ಹೊಟೇಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಕಳೆದ ವಾರವಷ್ಟೇ ನಗರಕ್ಕೆ ಕಾಲಿಟ್ಟ ರಷ್ಯನ್ ಅಧಿಕಾರಿಗಳು ವಾರ ಕಳೆಯುವುದರೊಳಗಾಗಿ ಸ್ಥಳೀಯರ ವಿರೋಧ ಕಟ್ಟಿಕೊಂಡಿದ್ದಾರೆ.
ನಗರದ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಡಲತೀರದಲ್ಲಿ ಅರೆನಗ್ನರಾಗಿ ಬಿಯರ್ ಹಾಗೂ ಸಿಗರೇಟ್ ಸೇದುತ್ತಾ ತಿರುಗಾಡುತ್ತಿರುವ ಬಗ್ಗೆ ನಗರದ ಜನರು ಅಸಮಾದಾನಗೊಂಡಿದ್ದಾರೆ. ಶನಿವಾರ ಹಾಗೂ ಭಾನುವಾರ ನಗರದಲ್ಲಿ ರಷ್ಯನ್‌ರ ಹಾವಳಿ ಹೆಚ್ಚಾಗಿತ್ತು. ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಮೋಜು ಮಸ್ತಿಗಾಗಿ ಬಂದಿದ್ದ ರಷ್ಯನ್ನರು ನಗ್ನರಾಗಿ ಕಡಲತೀರದಲ್ಲಿ ಕಾಣಿಸಿಕೊಂಡರು. ಇದರಿಂದ ಸಮುದ್ರ ತೀರದಲ್ಲಿದ್ದ ಪ್ರವಾಸಿಗರು ಹಾಗೂ ಸ್ಥಳೀಯರು ಮುಜುಗರಕ್ಕೆ ಈಡಾಗುವಂತಾಯಿತು.
ಕೆಲವು ಸಾರ್ವಜನಿಕರು ಪೊಲೀಸರಿಗೆ ವಿದೇಶಿಯರ ದುರ್ವರ್ತನೆಯ ಬಗ್ಗೆ ಮಾಹಿತಿ ನೀಡಿದಾಗ ಪೊಲೀಸರು ರಷ್ಯನ್ ಅಧಿಕಾರಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ವರ್ತನೆಗೆ ಭಾರತದಲ್ಲಿ ಅವಕಾಶವಿಲ್ಲ. ತಮ್ಮ ಮೋಜು ಮಸ್ತಿಯಲ್ಲಿ ಮಿತಿಯಿರಲಿ ಎಂದು ಸಮಾಧಾನದಿಂದ ತಿಳಿಸಿದ್ದಾರೆ. ಆದರೆ, ಭಾನುವಾರವೂ ತಮ್ಮ ವರ್ತನೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದ ರಷ್ಯನ್‌ರು ಮತ್ತೆ ನಗರದ ಗ್ರೀನ್ ಸ್ಟ್ರೀಟ್ ಹಾಗೂ ಕಾಜುಬಾಗ ರಸ್ತೆಗಳಲ್ಲಿ ಅರೆನಗ್ನರಾಗಿ ಬೀಯರ್ ಬಾಟಲ್ ಹಿಡಿದು ಪ್ರತ್ಯಕ್ಷರಾಗಿದ್ದಾರೆ. ಇದರಿಂದ ಸಾರ್ವಜನಿಕರ ಅಸಮಧಾನ ಮತ್ತಷ್ಟು ಹೆಚ್ಚಿದ್ದು, ಸ್ಥಳೀಯ ಪೊಲೀಸರಿಗೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ರಷ್ಯನ್ ಅಧಿಕಾರಿಗಳನ್ನು ಕಾರವಾರಕ್ಕೆ ಕರೆತರುವಾಗ ಅವರಿಗೆ ಇಲ್ಲಿನ ಆಚಾರ ವಿಚಾರಗಳ ಬಗ್ಗೆ ತಿಳಿಸಬೇಕಿತ್ತು ಹಾಗೂ ಕಾರವಾರದಲ್ಲಿ ಅವರಿಗಾಗಿ ಪ್ರತ್ಯೇಕ ಸ್ಥಳಗಳನ್ನು ಮೀಸಲಿಡಿ ಎಂದು ಜನರು ಆಗ್ರಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement