ದಕ್ಷಿಣ ಕನ್ನಡದಲ್ಲಿ ಆಮ್ ಆದ್ಮಿ ಬಲವರ್ಧನೆ ಚಾಲನೆ
ಮಂಗಳೂರು: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರ ಪಡೆದುಕೊಂಡ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲೂ ಪಕ್ಷ ಸಂಚಲನ ಮೂಡಿಸಿದ್ದು, ಹಿರಿಯರು ಸೇರಿದಂತೆ 430 ಮಂದಿ ಪಕ್ಷಕ್ಕೆ ಹೆಸರು ನೋಂದಾಯಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಎಸ್. ನಂದಗೋಪಾಲ್ ಹೇಳಿದ್ದಾರೆ.
ನಗರದ ಕಾರ್‌ಸ್ಟ್ರೀಟ್ ಬಿಇಎಂ ಪ್ರೌಢಶಾಲೆಯಲ್ಲಿ ಭಾನುವಾರ ಸದಸ್ಯತ್ವ ನೋಂದಣಿ ಕಾರ್ಯಕ್ರಮ ನಡೆಯಿತು.
ಪಕ್ಷವು 300 ಮಂದಿಯ ನಿರೀಕ್ಷೆಯಲ್ಲಿತ್ತು. ಆದರೆ ನಿರೀಕ್ಷೆಗೂ ಮೀರಿದ ಜನರು ಇಲ್ಲಿ ಆಗಮಿಸಿದ್ದರು. ಒಟ್ಟು 700 ಮಂದಿ ಆಗಮಿಸಿದ್ದು, ಇದರಲ್ಲಿ ಹೆಚ್ಚು ಮಂದಿ ಈಗಾಗಲೇ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಹೆಸರು ನೋಂದಾಯಿಸಿದವರು ಎಂದರು.
ವಿದ್ಯಾರ್ಥಿ ಬಳಗ ನಿರೀಕ್ಷೆಯಿತ್ತು. ಆದರೆ ಇಷ್ಟು ಮಂದಿಯ ನೋಂದಣಿ ಮುಂದಿನ ಯೋಜನೆಗಳನ್ನು ರೂಪಿಸಲು ಹುರುಪು ತಂದಿದ್ದು, ಈಗಾಗಲೇ ಬ್ಯಾನರ್‌ಗಳಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ನೀಡಿದವರನ್ನೂ ಸದಸ್ಯರಾಗಿ ನೋಂದಾಯಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 25 ಸಾವಿರ ಜನರ ನೋಂದಣಿ ಗುರಿಯಿದ್ದು, 26ರೊಳಗೆ ಎಲ್ಲ ತಾಲೂಕುಗಳಲ್ಲಿ ನೋಂದಣಿ ಕಾರ್ಯ ಪೂರ್ತಿಗೊಳಿಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಧರ್ಮೇಂದ್ರ ಕೆ. ಹೇಳಿದರು.
ಸದಸ್ಯತ್ವ ಪಡೆದವರಲ್ಲಿ ವೈದ್ಯರು, ವಕೀಲರು, ನಿವೃತ್ತ ನೌಕರರು, ಎನ್‌ಜಿಒಗಳು, ಲಾರಿ ಚಾಲಕರು, ಐಟಿ ಕ್ಷೇತ್ರದ ಉದ್ಯೋಗಸ್ಥರೂ ಇದ್ದರು.