ನನ್ನ ಭವಿಷ್ಯ ರೂಪಿಸಿದ ಸತ್ಯಸಾಯಿ ಸಂಸ್ಥೆಗೆ ಚಿರಋಣಿ: ಕೃಷ್ಣ ಭೈರೇಗೌಡ
ಬಂಟ್ವಾಳ: ನನ್ನ ವ್ಯಕ್ತಿತ್ವ ರೂಪಿತವಾದದ್ದು ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ. ನನ್ನ ಭವಿಷ್ಯದ ತಳಪಾಯ ಹಾಕಿದ ಈ ಸಂಸ್ಥೆಗೆ ನಾನು ಚಿರಋಣಿಯಾಗಿದ್ದೇನೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಅಳಿಕೆಯ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಯುವದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಸ್ತೆಯ ಬದಿಯಲ್ಲಿದ್ದ ಒಂದು ಶಿಲೆಯನ್ನು ಕೆತ್ತಿ ದೇವಾಲಯದಲ್ಲಿಟ್ಟಾಗ ಮಾತ್ರ ಪೂಜಿಸಲ್ಪಡುತ್ತದೆ. ಹಾಗೆಯೇ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ಸಿಕ್ಕಾಗ ಮಾತ್ರ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಭಾಗವಹಿಸಿದ್ದರು. ಶ್ರೀಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆ ಅಧ್ಯಕ್ಷ ಯು. ಗಂಗಾಧರ ಭಟ್, ಕೆ.ಎಸ್. ಕೃಷ್ಣ ಭಟ್ ಇದ್ದರು. ನಿವೃತ್ತ ಸಂಸ್ಕೃತ ಉಪನ್ಯಾಸಕ ಡಾ.ಬಿ. ರಾಜಾರಾಮ್ ಸ್ವಾಗತಿಸಿದರು. ವಿದ್ಯಾಕೇಂದ್ರದ ನಿವೃತ್ತ ಪ್ರಾಂಶುಪಾಲ ಕೆ.ಸಂಜೀವ ಶೆಟ್ಟಿ ವಂದಿಸಿದರು. ಕನ್ನಡ ಉಪನ್ಯಾಸಕ ಕೆ. ಶ್ರೀಧರ್ ನಿರೂಪಿಸಿದರು.