ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆಶಾ ನಾಯಕ್ ವಜಾಕ್ಕೆ ಒತ್ತಾಯ
ಮಂಗಳೂರು: ದೇರಳಕಟ್ಟೆ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆಶಾ ನಾಯಕ್ ಮತ್ತು ಪತಿ ನರೇಂದ್ರ ನಾಯಕ್ ಮಹಿಳಾ ಜಾಗೃತ ದಳ ವಿರುದ್ಧ ದುರುದ್ದೇಶ ಪೂರ್ವಕ ಹೇಳಿಕೆ ನೀಡಿದ್ದಾರೆ. ಅಶಾ ನಾಯಕ್ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀಕರ ಪ್ರಭು ಆಗ್ರಹಿಸಿದ್ದಾರೆ.
ಸಂತ್ರಸ್ತೆಗೆ ನೆರವು ನೀಡಿರುವುದಾಗಿ ಹೇಳಿರುವ ಇವರು, ಆರಂಭದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸದೆ ಇದ್ದದ್ದು ಏಕೆ ಎಂದು ಮೊದಲು ತಿಳಿಸಬೇಕು. ಆರೋಪಿಗಳನ್ನು ರಕ್ಷಿಸುವ ರೀತಿಯಲ್ಲಿ ಹೇಳಿಕೆ ನೀಡಿ ಕೇಸ್ ದುರ್ಬಲ ಗೊಳಿಸಲು ಯತ್ನಿಸುತ್ತಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಹೋರಾಟ ನಡೆಸಿದ ಜಾಗೃತ ಮಹಿಳಾ ವೇದಿಕೆ ಸಂಘಟನೆ ಉದ್ದೇಶವನ್ನು ಪ್ರಶ್ನೆ ಮಾಡುತ್ತಿರುವ ಇವರ ನಡೆ ಮೇಲೆ ಸಂಶಯ ಮೂಡುತ್ತದೆ. ಬೇರೆ ಯಾರೇ ನೆರವಿಗೆ ಹೋಗಿದ್ದರೆ ಸಂತ್ರಸ್ತೆಗೆ ನ್ಯಾಯ, ಹೆಚ್ಚಿನ ಕಾನೂನು ನೆರವು ಸಿಗುತ್ತಿತ್ತು. ಆರೋಪಿಗಳಿಗೆ ನೆರವಾಗುವ ಬಹಿರಂಗ ಹೇಳಿಕೆ ನೀಡಿದ ಅಶಾ ನಾಯಕ್ ಅವರನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಶ್ರೀಕರ ಪ್ರಭು ಆಗ್ರಹಿಸಿದ್ದಾರೆ.
ಹುದ್ದೆಗೆ ಅವಮಾನ:
ವಿಹಿಂಪ, ಬಜರಂಗದಳ
ಮಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳು ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಂಘಪರಿವಾರದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಆರೋಪಿಸಿದೆ.
ಬಿಜೆಪಿ ಆಡಳಿತದ ಸರ್ಕಾರದಲ್ಲಿ ಆಶಾ ನಾಯಕ್ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮತೀಯ ಆಧಾರದಲ್ಲಿಯೇ ಕೇಸ್‌ಗಳನ್ನು ಇತ್ಯರ್ಥ ಮಾಡಿದ್ದಾರೆ. ಆದ್ದರಿಂದ ಸಂವಿಧಾನ ದತ್ತಾಗಿರುವ ಹುದ್ದೆಗೆ ಅವಮಾನ ಎಂದು ವಿಹಿಂಪ ಕಾರ್ಯಾಧ್ಯಕ್ಷ ಜಗದೀಶ ಶೇಣವ ಮತ್ತು ಬಜರಂಗದಳ ಸಂಚಾಲಕ ಭುಜಂಗ ಕುಲಾಲ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.