ಮೇ ಅಂತ್ಯದೊಳಗೆ ಮಾಣಿ- ಮೈಸೂರು ಹೆದ್ದಾರಿ ಪೂರ್ಣಕ್ಕೆ ಜಿಲ್ಲಾಧಿಕಾರಿ ಸೂಚನೆ
ಪುತ್ತೂರು: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿನ ಕಾಮಗಾರಿ ಗುಣಮಟ್ಟ ಮತ್ತು ಪೂರ್ಣಗೊಳಿಸುವ ಸಮಯದ ಕುರಿತು ಯಾವುದೇ ರಾಜಿಯಿಲ್ಲ. ಈ ಬಗ್ಗೆ ತಾನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತೆರಳಿ ಖುದ್ದು ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.
ಅವರು ಭಾನುವಾರ ಪುತ್ತೂರಿನ ಪ್ರವಾಸಿ ಬಂಗಲೆಯಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದು ಮೇ ಅಂತ್ಯದೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಕೆಆರ್‌ಡಿಸಿಎಲ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
2012ರಲ್ಲಿ ಪೂರ್ಣಗೊಳ್ಳಬೇಕಿದ್ದ ಮಾಣಿ- ಸಂಪಾಜೆ ರಾಜ್ಯ ಹೆದ್ದಾರಿ ಕಾಮಗಾರಿ ಕಳೆದ ಎಂಟು ವರ್ಷಗಳಿಂದ ನಡೆಯುತ್ತಿದ್ದು ಇನ್ನೂ ಪೂರ್ಣಗೊಂಡಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ಪೂರ್ಣವಾಗಲು ಅಡಚಣೆಯಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಮಾಣಿಯಿಂದ ಪುತ್ತೂರು ತನಕ ಸುಮಾರು 15 ಕಿ.ಮೀ. ರಸ್ತೆಯನ್ನು ತಾನು ವೀಕ್ಷಿಸಿದ್ದು ಈ ವ್ಯಾಪ್ತಿಯಲ್ಲಿ 8 ಕಡೆಗಳಲ್ಲಿ ರಸ್ತೆ ಕುಸಿತವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ರಸ್ತೆಯ ಡಾಂಬರೀಕರಣದ ಗುಣಮಟ್ಟದ ಬಗ್ಗೆಯೂ ತನಿಖೆ ನಡೆಸುವುದಾಗಿ ಅವರು ತಿಳಿಸಿದರು.
ಸೇತುವೆ ಕಿರಿದು: ಮಾಣಿ-ಮೈಸೂರು ರಸ್ತೆಯಲ್ಲಿ ಕೆಲವು ಕಡೆಗಳಲ್ಲಿ ಸೇತುವೆ ಕಿರಿದಾಗಿದ್ದು ರಸ್ತೆ ಅಗಲವಾಗಿದೆ. ಹಳೆ ಸೇತುವೆಯ ಗುಣಮಟ್ಟ ಪರಿಶೀಲಿಸುವಂತಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೋರಿ ನಿರ್ಮಾಣ ಸಮರ್ಪಕವಾಗಿಲ್ಲ, ರಸ್ತೆಗೆ ತಾಗಿಕೊಂಡೇ ಚರಂಡಿ ನಿರ್ಮಿಸಿದ್ದಾರೆ. ಈ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಡಿಸಿ ತಿಳಿಸಿದರು.
ಶಿರಾಡಿ ಘಾಟ್ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಶಾಸಕಿ ಶಕುಂತಳಾ ಶೆಟ್ಟಿ ಇದ್ದರು.