ವೈಭವದ ಕರಾವಳಿ ಉತ್ಸವ ಇನ್ನು ಪ್ರತಿ ಡಿಸೆಂಬರ್ ಕೊನೆ ಶುಕ್ರವಾರ: ಉಸ್ತುವಾರಿ ಸಚಿವ ರಮಾನಾಥ ರೈ
ಮಂಗಳೂರು: ಇನ್ನು ಕರಾವಳಿ ಉತ್ಸವ ಪ್ರತಿ ವರ್ಷ ಡಿಸೆಂಬರ್ ಕೊನೆ ಶುಕ್ರವಾರ ಉದ್ಘಾಟನೆಗೊಳ್ಳಲಿದೆ. ಇನ್ನಷ್ಟು ವಿಜೃಂಭಣೆಯಿಂದ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಭಾನುವಾರ ಕರಾವಳಿ ಉತ್ಸವದ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 20 ವರ್ಷದ ಹಿಂದೆ ಕರಾವಳಿ ಉತ್ಸವ ಆರಂಭಿಸಿದ್ದೆವು. ನಮಗಿಂತ ಬಳಿಕ ಉತ್ಸವ ಶುರು ಮಾಡಿದವರು ವಿಜೃಂಭಣೆಯಿಂದ ಮಾಡುತ್ತಿದ್ದಾರೆ. ಕರಾವಳಿ ಉತ್ಸವ ಜನರ ಉತ್ಸವವಾಗಿ ಪುನರುತ್ಥಾನ ಮೂಲಕ ಇನ್ನಷ್ಟು ಕಳೆಗಟ್ಟುವಂತೆ ಮಾಡುತ್ತವೆ ಎಂದರು. ಕರಾವಳಿ ಉತ್ಸವ ದೀಪ ಬೆಳಗಿಸಿ ಉದ್ಘಾಟಿಸಿದ ಸೇಂಟ್ ಅಲೋಶಿಯಸ್ ಕಾಲೇಜ್ ನಿವೃತ್ತ ಪ್ರಾಂಶುಪಾಲ ಪ್ರಶಾಂತ್ ಮಾಡ್ತ ಮಾತನಾಡಿ, ನಮ್ಮದು ಪ್ರಜಾಪ್ರಭುತ್ವ ದೇಶ, ಎಲ್ಲವನ್ನು ಒಪ್ಪಿಕೊಳ್ಳುವುದು. ವಿಭಿನ್ನ ಸಂಸ್ಕೃತಿ ಒಟ್ಟಾಗಿ ಇರುವ ನಾಡು. ಸಂಬಂಧಕ್ಕೆ ಬಿರುಕು ತರುವ 'ಒಡೆದ ಗಾಜು'ಗಳನ್ನು ಹೆಕ್ಕುವ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಊರ, ಪರವೂರ ಪ್ರತಿಭೆಗಳಿಗೆ ಸಮಿತಿ ಅವಕಾಶ ಮಾಡಿಕೊಟ್ಟಿದೆ, ನೂರಕ್ಕೂ ಹೆಚ್ಚು ತಂಡಗಳು ಪ್ರತಿಭೆ ಪ್ರದರ್ಶನ ನೀಡಲಿವೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ಸ್ವಾಗತಿಸಿದರು. ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಮೊಯ್ದಿನ್ ಬಾವ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಇದ್ದರು.
ಬಂದು ಹೋದರು!: ವಿಧಾನ ಪರಿಷತ್ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್ ಮತ್ತು ಮೋನಪ್ಪ ಭಂಡಾರಿ ಉದ್ಘಾಟನೆಗೆ 6 ಗಂಟೆಗೆ ಆಗಮಿಸಿದ್ದರು. 6.45ರವರೆಗೆ ಕಾದ ಬಳಿಕ ಅಲ್ಲಿಂದ ತೆರಳಿದರು. ಬಿಜೆಪಿ ಮುಖಂಡರು ತೆರಳುತ್ತಿದ್ದಂತೆಯೇ ಅತ್ತ ಉಸ್ತುವಾರಿ ಸಚಿವರ ಆಗಮನವಾಯಿತು!