ಅತ್ಯಾಚಾರ ಪ್ರಕರಣ ದಾಖಲು ಆಗ್ರಹ
ಹಿರಿಯಡ್ಕ: ಇತ್ತೀಚೆಗೆ ಉಡುಪಿಯಲ್ಲಿ ಯುವಕನೊಬ್ಬ ಕಾಲೇಜು ವಿದ್ಯಾರ್ಥಿನಿಯ ಅಶ್ಲೀಲ ಫೋಟೊಗಳನ್ನು ಫೇಸ್ಬುಕ್ನಲ್ಲಿ ಹಂಚಿದ ಘಟನೆಯ ಆರೋಪಿ ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸಬೇಕು ಎಂದು ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಕಾಲೇಜಿನಿಂದ ಹಿರಿಯಡಕ ಪೇಟೆ ವೃತ್ತದವರೆಗೆ ಮೆರವಣಿಗೆ ನಡೆಸಿದರು. ನಂತರ ಕಾಲೇಜು ವಿದ್ಯಾರ್ಥಿ ಅನಿಲ್ ಮಾತನಾಡಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು, ಅತ್ಯಾಚಾರ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದರು.
ಕಾಲೇಜಿನ ಎ.ಬಿ.ವಿ.ಪಿ. ಘಟಕದ ಅಧ್ಯಕ್ಷ ಭರತ್ ಶೆಟ್ಟಿ ಮತ್ತು ವಿದ್ಯಾರ್ಥಿ ನಾಯಕರಾದ ಪರಮೇಶ್ವರ್ ಶೆಟ್ಟಿ, ಚಿತ್ತರಂಜನ್ ಪ್ರಭು, ವಿಕ್ರಮ್ ಶೆಟ್ಟಿ, ಸ್ವಾತಿ ಕುಮಾರಿ, ಪ್ರದೀಪ್ ಶೆಟ್ಟಿ, ಧೀರಜ್ ಶೆಟ್ಟಿ ನೇತೃತ್ವ ವಹಿಸಿದ್ದರು.