ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಫೇಸ್ಬುಕ್ ಫೋಟೊ ಹಗರಣ: ಭಾರಿ ಪ್ರತಿಭಟನೆ

Rashmi Kasaragodu
Updated On : 14 Jan 2014, 1:28 am

ಉಡುಪಿ: ಕಟಪಾಡಿಯು ಮುಹಮ್ಮದ್ ನಾಸೀರ್ ಎಂಬಾತ ನಗರದ ಕಾಲೇಜೊಂದರ ವಿದ್ಯಾರ್ಥಿಯ ಅಶ್ಲೀಲ ಫೋಟೊಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ ಪ್ರಕರಣ ಮತ್ತು ಆರೋಪಿಯನ್ನು ಬೆಂಬಲಿಸಿ ಕರಪತ್ರಗಳನ್ನು ವಿತರಿಸಿರುವುದನ್ನು ಖಂಡಿಸಿ ಎಬಿವಿಪಿಯ ಉಡುಪಿ ಜಿಲ್ಲಾ ಘಟಕ ಸೋಮವಾರ ನಗರದ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ನಗರದ ಬಹುತೇಕ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಥಳಕ್ಕೆ ಎಸ್ಪಿ ಅಥವಾ ಜಿಲ್ಲಾಧಿಕಾರಿ ಬಾರದೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದ ವಿದ್ಯಾರ್ಥಿಗಳು ಸುಮಾರು 12 ಗಂಟೆ ವರೆಗೆ ರಸ್ತೆತಡೆ ನಡೆಸಿದರು. ನಂತರ ಸ್ಥಳಕ್ಕೆ ಬಂದ ಎಸ್ಪಿ ಡಾ. ಬೋರಲಿಂಗಯ್ಯಗೆ ಮನವಿ ಸಲ್ಲಿಸಲಾಯಿತು, ಆರೋಪಿ ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ನಗರದ ಪೂರ್ಣಪ್ರಜ್ಞ ಕಾಲೇಜು, ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜ್, ಉಡುಪಿ ಪ್ರಥಮ ದರ್ಜೆ ಕಾಲೇಜು, ಮಣಿಪಾಲದ ಮಾಧವ ಪೈ ಮೆಮೇರಿಯಲ್ ಕಾಲೇಜು, ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು, ಪೂರ್ಣಪ್ರಜ್ಞ ಮ್ಯಾನೇಜ್ಮೆಂಟ್ ಕಾಲೇಜು, ಮಹೇಶ್ ಪಿ.ಯು. ಕಾಲೇಜು ಮುಂತಾದ ಸುಮಾರು 12ಕ್ಕೂ ಅಧಿಕ ಕಾಲೇಜುಗಳ 1000ಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಂತಮ್ಮ ಕಾಲೇಜುಗಳಿಂದ ಮೆರವಣಿಗೆಯಲ್ಲಿ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಎಲ್ಲೆಡೆ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು.
 ಪ್ರತಿಭಟನೆ ನೇತೃತ್ವವನ್ನು ಎಬಿವಿಪಿ ಜಿಲ್ಲಾ ಪ್ರಮುಖರಾದ ಪ್ರಶಾಂತ್, ಸಂಘಟನಾ ಕಾರ್ಯದರ್ಶಿ ಶಿಶಿರ್, ನಗರ ಕಾರ್ಯದರ್ಶಿ ಅಭಿಷೇಕ್, ಸಹಕಾರ್ಯದರ್ಶಿ ಶ್ರೀನಿವಾಸ್ ಮತ್ತು ಅರ್ಜುನ್, ಮಂಗಳೂರು ವಿಭಾಗದ ವಿದ್ಯಾರ್ಥಿನಿ ಪ್ರಮುಖ್  ಅಕ್ಷತಾ ವಹಿಸಿದ್ದರು.  


ಕೋಮುವಾರು ಪ್ರೇಮಿಗಳ ಪಟ್ಟಿ!
ಎಬಿವಿಪಿ ನಾಯಕರು ಎಸ್ಪಿಗೆ ಮನವಿಯೊಂದಿಗೆ 'ಮಹತ್ವದ ಪಟ್ಟಿ' ಸಲ್ಲಿಸಿದ್ದಾರೆ. ಈ ಪಟ್ಟಿಯಲ್ಲಿ ನಗರದ ವಿವಿಧ ಕಾಲೇಜುಗಳಲ್ಲಿರುವ ನೂರಾರು ಪ್ರೇಮಿಗಳ ಹೆಸರುಗಳಿವೆ ಮತ್ತು ಅವರು ವಿಭಿನ್ನ ಕೋಮುಗಳಿಗೆ ಸೇರಿದವರು ಎಂದು ಆರೋಪಿಸಲಾಗಿದೆ.  ಪೊಲೀಸರು ಈ ಪ್ರೇಮಿಗಳ ಮನೆಗೆ ಹೋಗಿ ಅವರ ಹೆತ್ತವರಿಗೆ ತಮ್ಮ ಮಕ್ಕಳ ಪ್ರೇಮದ ಬಗ್ಗೆ ಮಾಹಿತಿ ನೀಡಬೇಕು ಮತ್ತು ಮಕ್ಕಳು ಈ ಪ್ರೇಮ ಜಾಲದಿಂದ ಹೊರಗೆ ಬರುವಂತೆ ಮಾಡಬೇಕು ಎಂದು ಎಬಿವಿಪಿ ನಾಯಕರು ಎಸ್ಪಿಗೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಪೊಲೀಸ್ ಇಲಾಖೆಗೆ ತಿಂಗಳ ಗಡುವು ನೀಡಲಾಗಿದೆ.


ಪ್ರಾಂಶುಪಾಲರ ವಿರುದ್ಧ ಧಿಕ್ಕಾರ
ವಿಭಿನ್ನ ಕೋಮುಗಳ ಪ್ರೇಮಿಗಳ ವಿರುದ್ಧ ಸಂಘಟಿಸಲಾಗಿದ್ದ ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಕಲಿಯುತ್ತಿರುವ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಲಾಯಿತು.  ಈ ಪ್ರಾಂಶುಪಾಲರು, ಸೋಮವಾರ ಎಂದಿನಂತೆ ತರಗತಿಗಳು ನಡೆಯುತ್ತವೆ, ಕಾಲೇಜಿನ ಯಾವುದೇ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಬಾರದು, ಭಾಗವಹಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿದ್ಯಾರ್ಥಿಗಳಿಗೆ ಕಳುಹಿಸಿದ್ದಾರೆನ್ನಲಾದ ಎಸ್ಎಂಎಸ್ನ್ನು ಓದಿ ಹೇಳಲಾಯಿತು ಮತ್ತು ಈ ಪ್ರಾಂಶುಪಾಲರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement