ಮಂಗಳೂರು ವಿ.ವಿ. ಮಟ್ಟದ ನೆಟ್ಬಾಲ್ ಪಂದ್ಯಾಟ
ವಿಟ್ಲ: ಇತಿಮಿತಿಗಳ ನಡುವೆಯೂ ಕಾಲೇಜು ಮಟ್ಟದ ರಾಷ್ಟ್ರೀಯ ಕ್ರೀಡೆಗಳನ್ನು ಸರ್ಕಾರಿ ಕಾಲೇಜುಗಳು ಆಯೋಜಿಸುವುದು ಹೆಮ್ಮೆಯ ವಿಚಾರ ಎಂದು ಮಂಗಳೂರು ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕ ಜಿ. ಯೋಗಾನಂದ ಹೇಳಿದ್ದಾರೆ. ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವತಿಯಿಂದ ಸೋಮವಾರ ಪ್ರಾರಂಭಗೊಂಡ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ನೆಟ್ಬಾಲ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು. ಜಿ.ಪಂ. ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ, ಸರ್ಕಾರಿ ಕಾಲೇಜಿಗಳಲ್ಲಿ ಸಮಸ್ಯೆ ಹಾಗೂ ಸವಾಲುಗಳ ನಡುವೆ ಇಂತಹ ಪಂದ್ಯಾಟ ನಡೆಸುವ ಮೂಲಕ ಕಾಲೇಜು ಇನ್ನು ಅಭಿವೃದ್ಧಿ ಹೊಂದಲಿ ಎಂದರು.
ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಉಪನಿರ್ದೇಶಕ ಡಾ. ಕಿಶೋರ್ ಕುಮಾರ್ ಮಾತನಾಡಿ, ಕ್ರೀಡಾಧಿಕಾರಿಗಳು ಶಿಸ್ತಿನಿಂದ ಪಂದ್ಯಾಟಗಳನ್ನು ನಡೆಸಿಕೊಟ್ಟಾಗ ಮುಂದಿನ ದಿನಗಳಲ್ಲಿ ಇಂತಹ ಕ್ರೀಡೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಲಹೆ ನೀಡಿದರು. ಪ್ರಾಂಶುಪಾಲ ಝೇವಿಯರ್ ಡಿ'ಸೋಜ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ-ರಕ್ಷಕ ಸಂಘದ ಕೋಶಾಧಿಕಾರಿ ಅಬ್ದುಲ್ ರಹಿಮಾನ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮೋನಪ್ಪ ಶೆಟ್ಟಿ ಇದ್ದರು. ಡಾ. ಗಿರಿಧರ್ ರಾವ್ ಸ್ವಾಗತಿಸಿದರು. ಉಪನ್ಯಾಸಕ ಶಂಕರ್ ಭಟ್ ನಿರೂಪಿಸಿದರು. ಕಾಲೇಜ್ ದೈಹಿಕ ಶಿಕ್ಷಕ ರಾಮಚಂದ್ರ ಕೆ. ವಂದಿಸಿದರು.