ಮದುವೆ ಮನೆ ಹೊಕ್ಕ ಶಂಕಿತನ ಸೆರೆ
ವಿಟ್ಲ: ಮದುವೆ ಮನೆಯಲ್ಲಿ ನಡೆಯುತ್ತಿದ್ದ ಡಿನ್ನರ್ ವೇಳೆ ವ್ಯಕ್ತಿಯೊಬ್ಬ ಮನೆಯೊಳಗೆ ಹೊಕ್ಕು ಕಳ್ಳನಂತೆ ವರ್ತಿಸಿದ್ದರಿಂದ ಸಂಶಯಗೊಂಡ ಸಾರ್ವಜನಿಕರು ಆತನನ್ನು ವಿಟ್ಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆತ ಕನ್ಯಾನ ಗ್ರಾಮದ ಬೈರಿಕಟ್ಟೆಯ ವಸಂತ ಎಂದು ಹೇಳಿಕೊಂಡಿದ್ದಾನೆ. ಪುಣಚ ಗ್ರಾಮದ ಕುಟ್ಟಿತ್ತಡ್ಕದ ಭೋಜ ಪೂಜಾರಿ ಪುತ್ರಿಯ ಮದುವೆ ಭಾನುವಾರ ನಡೆದಿದ್ದು, ಆ ಮನೆಯಲ್ಲಿ ರಾತ್ರಿ ಡಿನ್ನರ್ ಏರ್ಪಡಿಸಲಾಗಿತ್ತು. ರಾತ್ರಿ ಊಟವಾದ ಮೇಲೆ ವ್ಯಕ್ತಿಯೊಬ್ಬ ಮನೆಯೊಳಗೆ ಬಂದಿದ್ದರಿಂದ ಆತನ ಪರಿಚಯವಿಲ್ಲದ ಕೆಲವರು ಪ್ರಶ್ನಿಸಿದ್ದು, ಆತ ತಾನು ಪಾಣಾಜೆಯ ಅಜ್ಜಿಕಲ್ಲು ಎಂಬಲ್ಲಿಯ ತನ್ನ ಸಹೋದರಿಯ ಮನೆಗೆ ಬಂದಿದ್ದು, ಹಸಿವಾದ ಕಾರಣ ಊಟಕ್ಕೆ ಬಂದೆ ಎಂದು ಉತ್ತರಿಸಿದ. ಮೊದಲು ತಾನು ಕಾರಿನಲ್ಲಿ ಬಂದಿರುವುದಾಗಿ ಹೇಳಿದ್ದು, ಸ್ವಲ್ಪ ಹೊತ್ತಿನಲ್ಲಿ, ಬೈಕ್ನಲ್ಲಿ ಬಂದಿರುವುದಾಗಿ ತಿಳಿಸಿದ. ಬೈಕನ್ನು ಸಮೀಪದ ಪರಿಯಾಲ್ತಡ್ಕದಲ್ಲಿ ನಿಲ್ಲಿಸಿ ಬಂದಿದ್ದಾಗಿ ಹೇಳಿದ. ಆತ ಒಂದಕ್ಕೊಂದು ಸಂಬಂಧವಿಲ್ಲದಂತೆ ಮಾತನಾಡಡಿದ್ದರಿಂದ ಅನುಮಾನಗೊಂಡು ಅಲ್ಲಿದ್ದವರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ನಡೆಯುತ್ತಿದೆ.