ಶ್ರೀಕ್ಷೇತ್ರ ನಿಟಿಲಾಪುರ ಜೀರ್ಣೋದ್ಧಾರ ಸಮಿತಿ ಯಥಾಸ್ಥಿತಿ: ನ್ಯಾಯಾಲಯ ಆದೇಶ
ಬಂಟ್ವಾಳ: ಗೋಳ್ತಮಜಲು ಗ್ರಾಮ ಮೊಗರ್ನಾಡು ಸಾವಿರ ಸೀಮೆ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಊರ್ಜಿತದಲ್ಲಿರುವ ಈ ಹಿಂದಿನ ಜೀರ್ಣೋದ್ಧಾರ ಸಮಿತಿಯನ್ನು ಯಥಾಸ್ಥಿತಿ ಮುಂದುವರಿಸುವಂತೆ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ಸಮಿತಿ ಕಾರ್ಯದರ್ಶಿ ವಿಷ್ಣು ಭಟ್ ಪ್ರಕಟಣೆ ತಿಳಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗೌರವಾಧ್ಯಕ್ಷತೆಯಲ್ಲಿ ಇತ್ತೀಚೆಗೆ ಜೀರ್ಣೋದ್ಧಾರ ಸಮಿತಿ ರಚಿಸಿರುವ ಕ್ರಮದ ವಿರುದ್ಧ ಪ್ರಸ್ತುತ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಿತೇಂದ್ರ ಕೊಟ್ಟಾರಿ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯ ಯಥಾಸ್ಥಿತಿಗೆ ಆದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.
ಸಮಾಲೋಚನಾ ಸಭೆ: 22ರಂದು ಶ್ರೀ ದೇವಳದ ಸುತ್ತು ಪೌಳಿಯಲ್ಲಿ ಶ್ರೀ ಗಣಪತಿ ದೇವರ ಗುಡಿ, ಶಾಸ್ತವು ದೇವರ ಗುಡಿ, ಕುಮಾರಿ ದೇವಿಯ ಗುಡಿ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ಭಾನುವಾರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ಎಸ್. ಭಟ್ ಅಧ್ಯಕ್ಷತೆಯಲ್ಲಿ ಕ್ಷೇತ್ರದಲ್ಲಿ ನಡೆಯಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ. ಕೆ. ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿ ಶಿಲಾನ್ಯಾಸ ನಡೆಸಲು ಸಭೆ ತೀರ್ಮಾನಿಸಿತು.