ಸುಳ್ಯ: ಭಿನ್ನಕೋಮಿನ ಜೋಡಿ ಮದುವೆ ಯತ್ನ, ಹೆತ್ತವರ ತಡೆ
ಸುಳ್ಯ: ಮಡಿಕೇರಿ ಗದ್ದುಗೆ ಬಳಿಯ ತ್ಯಾಗರಾಜ ನಗರದ ಯುವಕ ಮತ್ತು ಚೆಂಬು ಗ್ರಾಮದ ಕುದ್ರೆಪಾಯದ ಇನ್ನೊಂದು ಕೋಮಿನ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಲು ಹೊರಟಿದ್ದ ವಿಷಯ ತಿಳಿದು, ಮನೆಯವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮದುವೆ ವಿಫಲಗೊಂಡಿದೆ. ಮಡಿಕೇರಿಯ ತ್ಯಾಗರಾಜ ಕಾಲನಿಯ ಯುವಕನೊಂದಿಗೆ ಚೆಂಬು ಕುದ್ರೆಪಾಯದವರಾಗಿದ್ದು ಮೈಸೂರಲ್ಲಿ ನರ್ಸ್ ಆಗಿದ್ದ ಯುವತಿ ಮದುವೆಯಾಗಲು ನಿರ್ಧರಿಸಿ, ಮಡಿಕೇರಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಅರ್ಜಿ ನೀಡಿದ್ದರು. ಅಲ್ಲಿ ವಿವಾಹ ನೋಂದಣಿಗೆ ಮುನ್ನ ಆಕ್ಷೇಪಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು.
ಆಕೆ ಗೆಳತಿ ಮೂಲಕ ವಿಷಯ ತಿಳಿದ ಯುವತಿಯ ಮನೆಯವರು ಮಡಿಕೇರಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಮಗಳನ್ನು ಹುಡುಕಿ ಕೊಡುವಂತೆ ವಿನಂತಿಸಿದರು. ಈ ಸಂದರ್ಭ ಯುವಕ ಮತ್ತು ಯುವತಿ ಮಂಗಳೂರಿಗೆ ಹೋಗಿ ಅಡಗಿದ್ದರೆನ್ನಲಾಗಿದೆ. ಸಂಪಾಜೆ ಪೊಲೀಸ್ ಠಾಣೆಯ ಪೊಲೀಸ್ ಇಬ್ರಾಹಿಂ ಎಂಬವರು ಹುಡುಗನ ಮನೆಯವರನ್ನು ಸಂಪರ್ಕಿಸಿ ಅವರಿಂದ ಅವರಿಬ್ಬರ ಇರುವಿಕೆಯ ಮಾಹಿತಿ ಪಡೆದು, ಸಂಪಾಜೆ ಪೊಲೀಸರ ಜತೆ ಮಂಗಳೂರಿಗೆ ಹೋಗಿ ಯುವತಿಯನ್ನು ವಾಪಸ್ ಕರೆತಂದು ಹೆತ್ತವರಿಗೆ ಒಪ್ಪಿಸಿದರೆಂದು ತಿಳಿದು ಬಂದಿದೆ.