ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅರ್ಧ ತಿಂಗಳೊಳಗೆ ರಾಜ್ಯಮಟ್ಟದ 2 ಯುವಜನ ಮೇಳ!

Mainashree
Updated On : 15 Jan 2014, 10:49 am

ಬಂಟ್ವಾಳ:  ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರೊಬ್ಬರು ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾದ ಕಾರಣವೋ ಏನೋ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೇವಲ 15 ದಿನಗಳ ಅಂತರದಲ್ಲಿ ಎರಡು ರಾಜ್ಯ ಮಟ್ಟದ ಯುವಜನ ಮೇಳ ನಡೆಯಲಿವೆ!
ಉಡುಪಿ ಜಿಲ್ಲೆಯ ಎಲ್ಲೂರಿನಲ್ಲಿ ಜ. 31, ಫೆ. 1 ಮತ್ತು 2ರಂದು 3 ದಿನಗಳ ಕಾಲ ರಾಜ್ಯಮಟ್ಟದ ಯುವಜನ ಮೇಳ ನಡೆಯಲಿದ್ದು, ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಫೆ. 15, 16 ಮತ್ತು 17 ರಂದು ರಾಜ್ಯಮಟ್ಟದ ಯುವಜನ ಮೇಳ ಆಯೋಜಿಸಲಾಗಿದೆ.
ಯಾಕೆ ಹೀಗೆ?: ರಾಜ್ಯವೊಂದೇ ,ಯುವಜನ ಮೇಳ ಎರಡು ಎಂದು ಹುಬ್ಬೇರಿಸಬೇಡಿ. ಉಡುಪಿಯ ಎಲ್ಲೂರಿನಲ್ಲಿ ನಡೆಯುವ ಯುವಜನ ಮೇಳ 2012- 13ನೇ ಸಾಲಿನದ್ದಾದರೆ, ವಿಟ್ಲದಲ್ಲಿ ನಡೆಯುವ ಯುವಜನ ಮೇಳ 2013-14 ನೇ ಸಾಲಿನದ್ದು.
ಕಳೆದ 2013 ರಲ್ಲಿ ನಡೆಯಬೇಕಿದ್ದ ಯುವಜನಮೇಳ ಸಂಘಟನಾತ್ಮಕ ಕೊರತೆಯಿಂದ ಬಾಕಿ ಉಳಿದಿದ್ದು, ಇದೇ ತಿಂಗಳ ಅಂತ್ಯಕ್ಕೆ ಉಡುಪಿಯಲ್ಲಿ ನಡೆಯಲಿದೆ.
ಅಂದಹಾಗೆ 2009- 10 ನೇ ಸಾಲಿನ ರಾಜ್ಯಮಟ್ಟದ ಯುವಜನ ಮೇಳ ನಡೆದದ್ದು 2012ರ ಜನವರಿಯಲ್ಲಿ(ಚಿತ್ರದುರ್ಗ), 2010- 11 (ಗದಗ), 2011- 12ನೇ ಸಾಲಿನ ಯುವಜನ ಮೇಳ ನಡೆದದ್ದು 2012 ರ ಡಿಸಂಬರ್‌ನಲ್ಲಿ (ಶಿವಮೊಗ್ಗ).
ಈ ಮಧ್ಯೆ 2013ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸದಿರುವುದು ಹಾಗೂ ಸರ್ಕಾರಗಳ ಗೊಂದಲ ಯುವಜನ ಮೇಳ ಆಯೋಜನೆಗೆ ಅಡ್ಡಿಯಾಗಿತ್ತು ಎನ್ನುವುದು ಇಲಾಖಾ ಅಧಿಕಾರಿಗಳ ಸಮರ್ಥನೆ.
ವಿಭಾಗದಲ್ಲೂ ನಡೆದಿರಲಿಲ್ಲ: ಕಳೆದ 2012-13ನೇ ಸಾಲಿನ ಯುವಜನಮೇಳ ಇದೀಗ ತಡವಾಗಿ ಆಯೋಜನೆಯಾಗಿದ್ದು, ವರ್ಷದ ಹಿಂದೆ ಇದರ ಜಿಲ್ಲಾಮಟ್ಟದ ಯುವಜನ ಮೇಳ ನಡೆದಿದ್ದರೂ, ವಿಭಾಗ ಮಟ್ಟದ ಸ್ಪರ್ಧೆಯನ್ನೂ ಆಯೋಜಿಸಿರಲಿಲ್ಲ.
ಇತ್ತೀಚೆಗಷ್ಟೇ ಮೈಸೂರಿನ ನಂಜನಗೂಡಿನಲ್ಲಿ 2012-13 ನೇ ಸಾಲಿನ ವಿಭಾಗ ಮಟ್ಟದ ಸ್ಪರ್ಧೆ ನಡೆಸಲಾಗಿದ್ದು, ವರ್ಷದ ಬಳಿಕ ಸ್ಪರ್ಧೆಗಳು ರಾಜ್ಯಮಟ್ಟದ ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ನೋಂದಣಿಯಾಗುವ ಯುವಕ ಮಂಡಲಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಯುವಜನ ಮೇಳಗಳ ಆಕರ್ಷಣೆ ಕಡಿಮೆಯಾಗುತ್ತಿದ್ದು, ಕೆಲವು ತಾಲೂಕುಗಳಲ್ಲಿ ಕಾಟಾಚಾರದ ಯುವಜನಮೇಳಗಳು ನಡೆಯುತ್ತಿವೆ. ಇಲಾಖೆ ತಾಲೂಕು ಮಟ್ಟದ ಆಯೋಜನೆಗೆ ಕಡಿಮೆ ಅನುದಾನ ನೀಡುತ್ತಿರುವುದೂ ಅಧಿಕಾರಿಗಳ ನಿರಾಸಕ್ತಿಗೆ ಕಾರಣವಾಗಿದೆ.

ಮೌನೇಶ ವಿಶ್ವಕರ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement