ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಂಎಸ್‌ಇಝಡ್: 3ನೇ ಹಂತದ ಪೈಪ್‌ಲೈನ್ ಬಾಕಿ

Mainashree
Updated On : 15 Jan 2014, 10:48 am

ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯ(ಎಂಎಸ್‌ಇಝಡ್)ಯೋಜನೆಯ ಮೂರನೇ ಹಂತದ ಪೈಪ್‌ಲೈನ್ ಕಾಮಗಾರಿ ಮುಕ್ತಾಯಕ್ಕೆ ಬಾಕಿ ಇದೆ ಎಂದು ಎಂಎಸ್‌ಇಝಡ್ ಜನರಲ್ ಮೆನೇಜರ್ ಶ್ರೀನಿವಾಸಲು ಹೇಳಿದ್ದಾರೆ.
ಮಂಗಳೂರಿನ ಎಂಜಿನಿಯರ್ಸ್ ಎಸೋಸಿಯೇಶನ್ ಆಶ್ರಯದಲ್ಲಿ ಮಂಗಳವಾರ ವುಡ್‌ಲ್ಯಾಂಡ್ ಹೊಟೇಲ್‌ನಲ್ಲಿ ನಡೆದ 'ಎಂಎಎಸ್‌ಇಝಡ್ ಮೂಲಸೌಕರ್ಯ' ವಿಚಾರದಲ್ಲಿ ಮಾತನಾಡಿದರು.
ಬಂಟ್ವಾಳ ಜಕ್ರಿಬೆಟ್ಟಿನಿಂದ ಎಂಎಸ್‌ಇಝಡ್‌ವರೆಗೆ 42 ಕಿ.ಮೀ. ದೂರ ಪೈಪ್‌ಲೈನ್ 2013 ಏಪ್ರೀಲ್‌ಗೆ ಪೂರ್ಣಗೊಂಡಿದೆ. ಪರೀಕ್ಷಾರ್ಥ ನೀರು ಪೂರೈಕೆಯೂ ಯಶಸ್ವಿಯಾಗಿದೆ. ಎಎಂಆರ್ ಜತೆ ಅಣೆಕಟ್ಟೆ ಒಪ್ಪಂದ ಮಾಡಿಕೊಂಡಿದ್ದು, ಅದರಿಂದ ಎಂಎಸ್‌ಇಝಡ್‌ಗೆ 35 ಎಂಜಿಡಿ ನೀರು ಸರಬರಾಜಾಗಲಿದೆ. ಇದರಲ್ಲಿ ಎಂಆರ್‌ಪಿಎಲ್ 3ನೇ ಹಂತಕ್ಕೆ 13 ಎಂಜಿಡಿ, ಒಎಂಪಿಎಲ್‌ಗೆ 4 ಎಂಜಿಡಿ, ಎಸ್‌ಇಝಡ್‌ಗೆ 15 ಎಂಜಿಡಿ ನೀರು ಪೂರೈಕೆಯಾಗಲಿದೆ. ಇದಲ್ಲದೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಳಚೆ ನೀರು ಶುದ್ಧೀಕರಿಸಿ ಎಂಎಸ್‌ಇಝಡ್‌ಗೆ ಸಿಗಲಿದೆ. ಪಾಲಿಕೆಯ ಮುಲ್ಲಕಾಡು ಪ್ಲಾಂಟ್ ಈಗಾಗಲೇ ಕಾರ್ಯಾಚರಿಸುತ್ತಿದ್ದು, ಬಜಾಲ್ ಮತ್ತು ಸುರತ್ಕಲ್ ಪ್ಲಾಂಟ್‌ಗಳಿಂದ ಎಂಎಸ್‌ಇಝಡ್‌ಗೆ ಕೊಳಚೆ ನೀರು ಪೂರೈಸುವ ಸಂಪರ್ಕ ಕಲ್ಪಿಸಲಾಗುತ್ತಿದೆ.
ಎಂಎಸ್‌ಇಝಡ್ ಪ್ರದೇಶದಲ್ಲಿ ನೀರು ಸಂಗ್ರಹ ಮತ್ತು ಶುದ್ಧೀಕರಣ ಸ್ಥಾವರ ಸ್ಥಾಪಿಸಲಾಗುತ್ತಿದ್ದು, ಫೆಬ್ರವರಿಗೆ ಮುಕ್ತಾಯಗೊಳ್ಳಲಿದೆ. ಅಲ್ಲಿಂದ ಬಳಕೆಯಾದ ನೀರನ್ನು ಸಮುದ್ರಕ್ಕೆ ಬಿಡುವ 3ನೇ ಹಂತದ ಪೈಪ್‌ಲೈನ್ ಕಾಮಗಾರಿ ಇನ್ನಷ್ಟೇ ಮುಕ್ತಾಯವಾಗಬೇಕಿದೆ. ಕೊಳಚೆ ನೀರಿನಲ್ಲಿ ಶೇ.30ನ್ನು ಕೈಗಾರಿಕೆಗೆ ಬಳಸಲಿದ್ದು, ಶೇ.70ನ್ನು ಶುದ್ಧೀಕರಿಸಿ ಇತರೆ ಉಪಯೋಗಕ್ಕೆ ಉಪಯೋಗಿಸಲಾಗುವುದು. ಎಂಎಸ್‌ಇಝಡ್‌ನೊಳಗೆ ನೀರು ಸಂಪರ್ಕಗಳನ್ನು ಏರ್ಪಡಿಸಲಾಗುತ್ತಿದೆ. ಜೋಕಟ್ಟೆಯಲ್ಲಿ ಪೈಪ್‌ಲೈನ್ ಕೊಂಕಣ ರೇಲ್ವೆ ಟ್ರಾಕ್ ಹಾದುಹೋಗಬೇಕಾಗಿದೆ ಎಂದರು.
ಪದಾಧಿಕಾರಿಗಳಾದ ಡಾ.ಶ್ರೀಹರಿ, ಸತೀಶ್ ರಾವ್, ಹರೀಶ್, ಡಾ.ಆರ್.ಜಿ.ಡಿಸೋಜ, ಎಸ್.ಎನ್.ಭಟ್, ದಿವಾಕರ ಶೆಟ್ಟಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement