ಕ್ರಿಕೆಟ್ ಬೆಟ್ಟಿಂಗ್, ಇತ್ತಂಡ ಘರ್ಷಣೆ: ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು
ಮಂಗಳೂರು: ಸುರತ್ಕಲ್ನಲ್ಲಿ ಭಿನ್ನಕೋಮಿನ ತಂಡಗಳ ನಡುವಿನ ಕ್ರಿಕೆಟ್, ಬೆಟ್ಟಿಂಗ್ ವಿಚಾರದಲ್ಲಿ ಸೋಮವಾರ ರಾತ್ರಿ ಪರಸ್ಪರ ಹಲ್ಲೆ, ಸರಣಿ ಹೊಡೆದಾಟ ನಡೆದಿದೆ.
ಈ ಘಟನೆಗಳಿಗೆ ರೆಕ್ಕೆಪುಕ್ಕ ಹಬ್ಬಿ, ಕುಳಾಯಿ ಸಮೀಪದ ಭಜನೆ ಮಂದಿರದಲ್ಲಿ ಮತ್ತು ಸಮೀಪದ ಪ್ರಾರ್ಥನೆ ಮಂದಿರದಲ್ಲಿ ಜನರು ಜಮಾಯಿಸಿದ್ದು, ಪೊಲೀಸರು ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ಘಟನೆ ಹಿನ್ನೆಲೆ: ಸುರತ್ಕಲ್ನಲ್ಲಿ ಇತ್ತೀಚೆಗೆ ಭಿನ್ನ ಕೋಮಿನ ತಂಡದವರು ಕ್ರಿಕೆಟ್ ಸರಣಿ ನಡೆಸಿದ್ದು, ಗೆದ್ದವರಿಗೆ ಸೋತವರು ಹಣ ನೀಡುವ ಬೆಟ್ಟಿಂಗ್ ಹಾಕಿದ್ದರು. ಒಂದು ಕೋಮಿನ ತಂಡದವರು ಸರಣಿ ಸೋತಿದ್ದು, ಈ ಹಣ ನೀಡುವಂತೆ ಇನ್ನೊಂದು ಕೋಮಿನ ತಂಡದವರು ಒತ್ತಾಯಿಸುತ್ತಿದ್ದರು. ಸೋಮವಾರ ರಾತ್ರಿ ಮತ್ತೆ ಹಣ ಕೇಳಿದಾಗ ಭಿನ್ನಕೋಮಿನ ತಂಡದ ನಾಯಕ ಕೊಡಲು ನಿರಾಕರಿಸಿದ್ದ. ಇದರಿಂದ ಸಿಟ್ಟಿಗೆದ್ದವರು ಬ್ಯಾಟ್, ವಿಕೆಟ್ಗಳಿಂದ ಹಲ್ಲೆ ನಡೆಸಿದ್ದರು.
ಬಳಿಕ ಹಲ್ಲೆಗೊಳಗಾದ ಸಮುದಾಯದ ಯುವಕರು ಹಲ್ಲೆಗೈದವರ ಮನೆಗೆ ನುಗ್ಗಿದ್ದು ಅಲ್ಲಿದ್ದ ಹಿರಿಯರು, ಮಹಿಳೆಯರ ಮೇಲೂ ಹಲ್ಲೆ ನಡೆಸಿದರು. ಬಳಿಕ ಇಬ್ಬರು ಯುವಕರ ಮೇಲೂ ಹಲ್ಲೆ ಮಾಡಿದ್ದಾರೆ. ಇದರಿಂದ ಪರಿಸರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎಸಿಪಿ ರವಿ ಕುಮಾರ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದೆ.
ಕೂಳೂರಲ್ಲಿ ಉದ್ವಿಗ್ನ: ಮಂಗಳವಾರ ನಗರದಲ್ಲಿ ಕೋಮುಘರ್ಷಣೆ, ಕಲ್ಲು ತೂರಾಟ, ಬಂಧನ ವದಂತಿಗಳದ್ದೇ ಕಾರುಬಾರು. ಒಂದು ಸಮುದಾಯದ ಮೆರವಣಿಗೆ ಆಯೋಜಿಸಿತ್ತು. ಪರಿಣಾಮ ಕೂಳೂರು ಭಜನೆ ಮಂದಿರ ಮತ್ತು ಪ್ರಾರ್ಥನ ಮಂದಿರದಲ್ಲಿ ಎರಡು ಸಮುದಾಯದವರು ಒಟ್ಟು ಸೇರಿ ಬಿಗುವಿನ ವಾತಾವರಣ ಉಂಟಾಗಿತ್ತು. ಪೊಲೀಸರು ಆಗಮನದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಸಭೆಯಲ್ಲಿ ಶಾಂತಿ: ಸಂಜೆ ಎರಡು ಸಮುದಾಯದ ಮುಖಂಡರನ್ನು ಕರೆಸಿ ಶಾಂತಿ ಸಭೆ ನಡೆಸಿದ್ದೇವೆ. ಎರಡು ಕಡೆಯಲ್ಲಿ ಅಪಾರ್ಥ ಮಾಡಿಕೊಂಡಿದ್ದರಿಂದ ಈ ರೀತಿಯಾಗಿದೆ. ಸಭೆ ಬಳಿಕ ನಿಜ ವಿಚಾರ ತಿಳಿದುಕೊಂಡು ಎರಡು ಸಮುದಾಯದವರು ಪರಸ್ಪರ ಶಾಂತಿ, ಸೌಹಾರ್ದ ನೆಲೆಸುವ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ ಎಂದು ಎಸಿಪಿ ರವಿ ಕುಮಾರ್ ತಿಳಿಸಿದ್ದಾರೆ.