ಗುಂಡು ಹಾರಿಸಿ ನಕ್ಸಲ್ ನಿಗ್ರಹ ಪಡೆ ಪೇದೆ ಆತ್ಮಹತ್ಯೆ
ಕುಂದಾಪುರ/ಪುತ್ತೂರು: ಇಲ್ಲಿನ ಅಮಾಸೆಬೈಲು ಪೊಲೀಸ್ ಠಾಣೆ ವ್ಯಾಪ್ತಿಯ ಜಡ್ಡಿನಗದ್ದೆ ಎಂಬಲ್ಲಿರುವ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಶಿಬಿರದಲ್ಲಿ ಪೇದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.
ಪುತ್ತೂರಿನ ಬಲ್ನಾಡು ಗ್ರಾಮದ ಬುಳ್ಳೇರಿಕಟ್ಟೆ ಅಗರ್ತಬೈಲು ನೀರುಕುಕ್ಕು ನಿವಾಸಿ ಆದಂ ಡಿಸೋಜಾ ಅವರ ಪುತ್ರ ಆಲ್ಬರ್ಟ್ ಡಿಸೋಜಾ(38)ಮೃತರು.
ಆಲ್ಬರ್ಟ್ ಡಿ'ಸೋಜಾ ಅವರನ್ನು ರಾತ್ರಿ ಶಿಬಿರದ ಹಿಂದುಗಡೆ ರಾತ್ರಿ ಪಹರೆ ಕರ್ತವ್ಯಕ್ಕೆ ನೇಮಿಸಲಾಗಿದ್ದು, ರಾತ್ರಿ ಸುಮಾರು 11.20ರ ಸುಮಾರಿಗೆ ಗುಂಡು ಹಾರಿದ ಶಬ್ದ ಕೇಳಿತು. ತಕ್ಷಣ ಶಿಬಿರದ ಉಸ್ತುವಾರಿ ಅಧಿಕಾರಿ ಶರತ್ ಎಂ.ಎ. ಮತ್ತು ಇತರ ಸಿಬ್ಬಂದಿ ಶಿಬಿರದ ಸುತ್ತ ಪರಿಶೀಲಿಸಿದಾಗ, ಆಲ್ಬರ್ಟ್ ಡಿಸೋಜಾ ಕೆಳಗೆ ಬಿದ್ದಿರುವುದು ಕಂಡುಬಂತು.
ಆರಂಭದಲ್ಲಿ ಅವರನ್ನು ಹೊರಗಿನಿಂದ ನಕ್ಸಲರೋ ಅಥವಾ ಇನ್ಯಾರೋ ಗುಂಡು ಹಾರಿಸಿದ್ದು ಎಂದು ಗಾಬರಿಯಾಯಿತಾದರೂ, ಡಿ'ಸೋಜ ತಮ್ಮ ಕೈಯಲ್ಲಿದ್ದ ರೈಫಲ್‌ನಿಂದ ಗಲ್ಲದ ಕೆಳಗೆ ಗುಂಡು ಹಾರಿಸಿ ತಮ್ಮನ್ನೇ ತಾವು ಕೊಂದುಕೊಂಡಿರುವುದು ತಿಳಿಯಿತು. ಅತ್ಯಾಧುನಿಕವಾಗಿರುವ ಈ ರೈಫಲ್‌ನ ಗುಂಡು ಗಲ್ಲವನ್ನು ಹೊಕ್ಕು ತಲೆಯಿಂದ ಹೊರಗೆ ಬಂದಿತ್ತು.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ದ.ಕ. ಜಿಲ್ಲೆಯ ಪುತ್ತೂರಿನವರಾದ ಅವರು ಒಂದು ವಾರ ರಜೆಯಲ್ಲಿ ಊರಿಗೆ ಹೋಗಿ ಬಂದಿದ್ದರು. ಮುಂದಿನ ವಾರ ಅವರ ಮದುವೆಯ ನಿಶ್ಚಿತಾರ್ಥ ಕೂಡ ಇತ್ತು. ಅಮಾಸೆಬೈಲು ನಕ್ಸಲ್ ನಿಗ್ರಹ ಪಡೆಯ ಶಿಬಿರದಲ್ಲಿ ಇತರ ಪೊಲೀಸ್ ಸಿಬ್ಬಂದಿ ಘಟನೆಯಿಂದ ತೀವ್ರವಾಗಿ ನೊಂದುಕೊಂಡಿದ್ದರು. ಶಿಬಿರವನ್ನು ಘಟನಾ ಸ್ಥಳದಿಂದ ಸ್ಥಳಾಂತರಗೊಳಿಸಲಾಗಿದೆ. ಶವವನ್ನು ಸ್ವಗ್ರಾಮಕ್ಕೆ ಕಳುಹಿಸಲಾಗಿದ್ದು, ಘಟನೆಯ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಊರಲ್ಲಿ ಅಂತ್ಯಕ್ರಿಯೆ: ಮಂಗಳವಾರ ಮಂಗಳೂರಿನಲ್ಲಿ ಮೃತರ ಮರಣೋತ್ತರ ಪರೀಕ್ಷೆ ಬಳಿಕ ಮಧ್ಯಾಹ್ನ ಮೃತನ ಮನೆ ಬಲ್ನಾಡಿಗೆ ತಂದು ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಕೆಎಸ್‌ಆರ್‌ಪಿ ಡಿಐಜಿ ಮನೀಷ್ ಕರ್ಬೀಕರ್, ಎಸ್‌ಪಿ ಸಂತನೂ ಸಿನ್ಹ, ಕೆಎಸ್‌ಆರ್‌ಪಿ 5ನೇ ಬೆಟಾಲಿಯನ್ ಕಮಾಂಡೆಂಟ್ ರಂಗಸ್ವಾಮಿ, ಎಎನ್‌ಎಫ್ ಎಸ್‌ಪಿ ಸುದರ್ಶನ್ ಮೃತರ ಮನೆಗೆ ಭೇಟಿ ನೀಡಿದರು.