ನೀರಿನ ಹಕ್ಕು ಕಸಿದರೆ ಬದುಕುವ ಸ್ವಾತಂತ್ರ್ಯ ಧಕ್ಕೆ: ಸುಬ್ರಹ್ಮಣ್ಯ ಶ್ರೀ
ಬಂಟ್ವಾಳ: ನೀರಿನ ಹಕ್ಕನ್ನು ಕಸಿದರೆ ಬದುಕುವ ಹಕ್ಕನ್ನು ಕಸಿದಂತೆ. ನೇತ್ರಾವತಿ ನದಿತಿರುವು ಯೋಜನೆಯಿಂದ ನೇತ್ರಾವತಿ ನದಿ ಮಾತ್ರವಲ್ಲ, ಕರಾವಳಿಯ ಎಲ್ಲರ ಬದುಕೂ ನಾಶವಾಗುತ್ತದೆ. ಈ ನಿಟ್ಟಿನಲ್ಲಿ ಜನರ ಬದುಕನ್ನು ಸುಗಮವಾಗಿಸುವ ಹೋರಾಟಕ್ಕೆ ಜಿಲ್ಲೆಯ ಜನತೆ ಸಜ್ಜಾಗಬೇಕಿದೆ ಎಂದು ಸುಬ್ರಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ನೇತ್ರಾವತಿ ರಕ್ಷಣಾ ಸಮಿತಿ ವತಿಯಿಂದ ಎತ್ತಿನಹೊಳೆ ಯೋಜನೆ ವಿರೋಧಿಸಿ ನದಿ ಉಳಿಸಿ, ಜೀವಸಂಕುಲ ರಕ್ಷಿಸಿ ಘೋಷಣೆಯಡಿ ಜಿಲ್ಲಾದ್ಯಂತ ನಡೆಯುವ ಹೋರಾಟಕ್ಕೆ ಸೋಮವಾರ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದ ಮುಂಭಾಗದಲ್ಲಿ ನದಿಪೂಜೆಯ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಜನರ ಬದುಕು ತೆಗೆಯುವ ಬದಲು ಬದುಕು ಕೊಡುವ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕು. ಇದು ಸಾವು ಬದುಕಿನ ಹೋರಾಟ. ಈ ನಿಟ್ಟಿನಲ್ಲಿ ಕರಾವಳಿಯ ಸಮಸ್ತ ಜನತೆ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಸ್ವಾಮೀಜಿ ನುಡಿದರು.
ಹೋರಾಟ ಸಮಿತಿಯ ಪ್ರಮುಖ ಎಂ.ಜಿ. ಹೆಗಡೆ ಮಾತನಾಡಿ, ಇದೊಂದು ಬೂಟಾಟಿಕೆಯ, ಎಡಬಿಡಂಗಿತನದ ಹಾಗೂ ಭ್ರಷ್ಟಚಾರಕ್ಕೆ ಇಂಬು ನೀಡುವ ಯೋಜನೆ. ಇದರಿಂದ ನದಿ ನೀರು ಬತ್ತಿ ಹೋಗುತ್ತದೆ. ಭ್ರಷ್ಟ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಜೇಬು ತುಂಬುತ್ತದೆ. ಕೋಲಾರಕ್ಕೆ ಕೊಳವೆ ಮಾತ್ರ ಹೋಗುತ್ತದೆ ಎಂದು ವ್ಯಂಗ್ಯವಾಡಿದರು.
ಪ್ರೊ.ಎಸ್.ಜಿ. ಮಯ್ಯ ತಾಂತ್ರಿಕ ಮಾಹಿತಿ ನೀಡಿ ಇದೊಂದು ಅತ್ಯಂತ ಕೆಟ್ಟ ಯೋಜನೆ. ಯಾವುದೇ ರೀತಿಯ ಸರ್ವೇ, ಅಧ್ಯಯನ, ಸಾಧಕ- ಬಾಧಕದ ಬಗ್ಗೆ ಪೂರ್ವಭಾವಿ ಸಮೀಕ್ಷೆ ನಡೆಸದೆ ರೂಪುಗೊಂಡಿರುವ ಈ ಯೋಜನೆಯ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಯಾಕೆ ಮೌನವಾಗಿದ್ದಾರೋ ಗೊತ್ತಿಲ್ಲ. ನದಿ ಮೂಲವನ್ನು ತಿರುಗಿಸಿ ನೀರುಣಿಸುವ ಯೋಜನೆ ಅವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಅಪ್ರಾಯೋಗಿಕವಾಗಿದ್ದು ಇದನ್ನು ಕೈಬಿಡುವಲ್ಲಿ ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮೊಡಂಕಾಪು ಚರ್ಚ್ ಧರ್ಮಗುರು ಮ್ಯಾಕ್ಸಿಂ ನೊರೊನ್ಹಾ ಆಶೀರ್ವಚನ ನೀಡಿದರು. ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ, ರೋಹಿತಾಕ್ಷ ರೈ, ಪುರುಷೋತ್ತಮ, ಮಮತಗಟ್ಟಿ, ಪದ್ಮಶೇಖರ್ ಜೈನ್ ಮತ್ತಿತರರು ಇದ್ದರು.