ಫೇಸ್‌ಬುಕ್ ಪ್ರಕರಣ; ವಿದ್ಯಾರ್ಥಿನಿ ಕಾಲೇಜಿನಿಂದ ತಾತ್ಕಾಲಿಕ ಅಮಾನತು
ಉಡುಪಿ: ಉಡುಪಿಯಲ್ಲಿ ಭಾರಿ ರಾದ್ಧಾಂತ- ಪ್ರತಿಭಟನೆಗೆ ಕಾರಣವಾಗಿರುವ ಫೇಸ್‌ಬುಕ್‌ನಲ್ಲಿ ಹರಿದಾಡಿದ ಅಶ್ಲೀಲ ಫೋಟೋ ಪ್ರಕರಣ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯ ತಾಯಿ ಕಾಲೇಜಿನ ಪ್ರಾಂಶುಪಾಲರಿಗೆ ಭೇಷರತ್ ಕ್ಷಮಾಪಣೆ ಪತ್ರ ಸಲ್ಲಿಸಿದ್ದಾರೆ.
ಈಕೆ ನಗರದ ಪ್ರತಿಷ್ಠಿತ ಕಾಲೇಜಿನ ಪದವಿ ವಿದ್ಯಾರ್ಥಿನಿಯಾಗಿದ್ದು, ಫೇಸ್‌ಬುಕ್ ಘಟನೆಯಿಂದಾಗಿ ಕಾಲೇಜಿನ ಪ್ರತಿಷ್ಠೆಗೆ ಹಾನಿಯಾಗಿದೆ, ಆದ್ದರಿಂದ ಆಕೆಯನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಆಕೆ ತನ್ನ ಪ್ರಿಯಕರನೊಂದಿಗೆ ಸಲುಗೆಯಿಂದಿರುವ ಫೋಟೋಗಳು ಫೇಸ್‌ಬುಕ್‌ನಲ್ಲಿ ಆಕೆಯ ಪ್ರಿಯಕರ ಹರಿಯಬಿಟ್ಟಿದ್ದು, ಆಕೆ ಆತನ ಮೇಲೆ ಪೊಲೀಸರಿಗೆ ದೂರು ನೀಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ ಸೋಮವಾರ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದು, ಕಾಲೇಜು ಮತ್ತು ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಧಿಕ್ಕಾರಗಳನ್ನು ಕೂಗಿದ್ದರು. ಫೇಸ್‌ಬುಕ್ ಘಟನೆ ಬಗ್ಗೆ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗ ದಳ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ತಾಯಿ ಕ್ಷಮೆ ಕೋರಿಕೆ: ಈ ಎಲ್ಲ ಘಟನೆಗಳಿಂದಾಗಿ ಕಾಲೇಜಿನ ಪ್ರತಿಷ್ಠೆಗೆ ಹಾನಿಯಾಗಿದ್ದು, ಕಾರಣವಾಗಿರುವ ವಿದ್ಯಾರ್ಥಿನಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ಆಕೆಗೆ ಮಾಹಿತಿ ನೀಡಲಾಗಿತ್ತು. ನಂತರ ಆಕೆ ತನ್ನ ತಾಯಿಯೊಂದಿಗೆ ಕಾಲೇಜಿಗೆ ಬಂದು ಘಟನೆಯಿಂದ ಕಾಲೇಜಿನ ಪ್ರತಿಷ್ಠೆಗೆ ಧಕ್ಕೆಯಾಗಿರುವುದನ್ನು ಒಪ್ಪಿಕೊಂಡಿದ್ದು ಲಿಖಿತವಾಗಿ ಬೇಷರತ್ ಕ್ಷಮೆ ಕೇಳಿದ್ದರು. ಅನಂತರ ಆಕೆಗೆ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಇದು ಕೇವಲ ಕಾಲೇಜಿನ ಪ್ರಶ್ನೆಯಲ್ಲ, ಆಕೆ ಇನ್ನು ಮುಂದೆ ಕಾಲೇಜಿಗೆ ಬರುವುದಕ್ಕೂ ಮುಜುಗರವಾಗುವ ಪರಿಸ್ಥಿತಿ ಕಾಲೇಜಿನಲ್ಲಿ ಸೃಷ್ಟಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಆಕೆಯನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಈ ಮಧ್ಯೆ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿ ಇಬ್ಬರೂ ನಗರದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂಬ ಬಗ್ಗೆ ಭಾರಿ ವದಂತಿಗಳು ಹುಟ್ಟಿಕೊಂಡಿವೆ. ಆದರೆ ಎಸ್ಪಿ ಡಾ. ಬೋರಲಿಂಗಯ್ಯ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.