ವಿದ್ಯಾರ್ಥಿಗೆ ಇರಿದು ಕೊಲೆಗೆ ಯತ್ನ
ಮಂಗಳೂರು: ಕಾಲೇಜ್ನಿಂದ ಡಿಬಾರ್ ಆದ ಸಿಟ್ಟಿಗೆ ಸಹಪಾಠಿಯನ್ನು ನಾಲ್ವರು ಗೆಳೆಯರ ಜತೆ ಸೇರಿಕೊಂಡು ಹಳೆ ವಿದ್ಯಾರ್ಥಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಈ ಕೊಲೆಯತ್ನದಲ್ಲಿ ರೌಡಿ ಶೈಲೇಶ್ ಕೈವಾಡ ಇರುವ ಬಗ್ಗೆ ಕದ್ರಿ ಪೊಲೀಸರು ಶಂಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಗಾಂಜಾ ವ್ಯಸನಿ ಶೈಲೇಶ್ ಈ ಹಿಂದೆ ಕಡ್ಲೆ ವ್ಯಾಪಾರಿ ಗುರು ಕೊಲೆ ಪ್ರಕರಣ ಸಹಿತ ಎರಡು ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಕೆನರಾ ಕಾಲೇಜ್ ಪ್ರಥಮ ಬಿಎ ವಿದ್ಯಾರ್ಥಿ ಅಕ್ಷಯ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಪಾಯದಿಂದ ಪಾರಾಗಿದ್ದಾನೆ. ಕಳೆದ ವರ್ಷ ಒಂದೇ ತರಗತಿ ವಿದ್ಯಾರ್ಥಿಗಳು ಹೊಡೆದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಅಕ್ಷಯ್ ಕೇಸ್ ದಾಖಲಿಸಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿತ್ತು. ಇದೇ ಸಿಟ್ಟಿನಲ್ಲಿ ಧನುಷ್, ರಮೇಶ್, ರಾಹುಲ್ ಮತ್ತು ಧನುಷ್ ಸೇರಿಕೊಂಡು ಶೈಲೇಶ್ ಗೆ ಸುಪಾರಿ ನೀಡಿ ಸೋಮವಾರ ಮಾನಸ ಟವರ್ ಬಳಿ ಚೂರಿಯಿಂದ ಇರಿದಿದ್ದಾರೆ.