ಸುದ್ದಿ ಸಂಕ್ಷೇಪ
ಬಹುಭಾಷಾ ಕವಿತೆ ಆಹ್ವಾನ
ಮಂಗಳೂರು: ಗಣರಾಜ್ಯೋತ್ಸವ ಪ್ರಯುಕ್ತ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಕನ್ನಡ, ತುಳು, ಕೊಂಕಣಿ, ಮಲಯಾಳಂ, ಬ್ಯಾರಿ, ಕೊಡವ, ಹಿಂದಿ ಇತ್ಯಾದಿ ಬಹುಭಾಷೆಗಳ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ನಗರದ ಪುರಭವನದಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಜಿಲ್ಲೆಯ ಪ್ರತಿಭಾನ್ವಿತ ಕವಿಗಳು ತಾವೇ ರಚಿಸಿದ ಕವನಗಳನ್ನು ಜ. 20ರೊಳಗೆ ಕಳುಹಿಸಿಕೊಡಬೇಕು. ಅಧ್ಯಕ್ಷರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಕಾಂಪ್ಲೆಕ್ಸ್, ಮಹಾತ್ಮಗಾಂಧಿ ರಸ್ತೆ, ಕೊಡಿಯಾಲ್ಬೈಲ್, ಮಂಗಳೂರು ಈ ವಿಳಾಸಕ್ಕೆ ತಲುಪಿಸಲು ಕೋರಲಾಗಿದೆ.
'ನನ್ನ ಕನಸಿನ ಭಾರತ' ಪ್ರಬಂಧ ಸ್ಪರ್ಧೆ
ಬೆಳ್ತಂಗಡಿ: ಟಿ.ಜಿ. ಜೋಯ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ಬೆಳ್ತಂಗಡಿ ತಾಲೂಕಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನನ್ನ ಕನಸಿನ ಭಾರತ ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ 3000, ದ್ವಿತೀಯ 2000, ತೃತಿಯ 1500 ಹಾಗೂ ಚತುರ್ಥ 1000 ಬಹುಮಾನ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಸ್ವಹಸ್ತಾಕ್ಷರಗಳಲ್ಲಿ 4 ಪುಟ ಮೀರದಂತೆ ತಮ್ಮ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ಪಡೆದ ದೃಢೀಕರಣ ಪತ್ರದೊಂದಿಗೆ ಜ.15ರೊಳಗಾಗಿ ಪ್ರಬಂಧಗಳನ್ನು ಕಳುಹಿಸಿಕೊಡಬೇಕು. ಪ್ರಬಂಧಗಳೊಂದಿಗೆ ಪೂರ್ಣ ವಿಳಾಸವನ್ನು ಪ್ರತ್ಯೇಕವಾಗಿ ಬರೆದು ಕಳುಹಿಸಬೇಕು. ಪ್ರಬಂಧಗಳನ್ನು ಟಿ.ಜಿ. ಜೋಯ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಅಭಿಲಾಷ್ ಕಾಂಪ್ಲೆಕ್ಸ್ ಅಣಿಯೂರು ನೆರಿಯಾ -574228 ಅಥವಾ ಸಿರಿಯನ್ ಕೆಥೋಲಿಕ್ ವಿವಿಧೋದ್ದೇಶ ಸರಕಾರಿ ಸಂಘ, ಸುವರ್ಣ ಕಾಂಪ್ಲೆಕ್ಸ್ ಮೂರು ಮಾರ್ಗದ ಬಳಿ ಬೆಳ್ತಂಗಡಿ ಈ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬಹುದು. ಮಾಹಿತಿಗೆ 9448882212 ಹಾಗೂ 9739719724.
ಬಲೆಯಲ್ಲಿ ಸಿಲುಕಿದ್ದ ಸರ್ಪದ ರಕ್ಷಣೆ
ಉಪ್ಪಿನಂಗಡಿ: ಬಲೆಯೊಂದಲ್ಲಿ ಸಿಲುಕಿದ್ದ ನಾಗರಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಇಲ್ಲಿಗೆ ಸಮೀಪದ ನೆಲ್ಯಾಡಿ ಗ್ರಾಮದ ಇಚ್ಚೂರು ಎಂಬಲ್ಲಿ ನಡೆದಿದೆ. ಇಚ್ಚೂರು ಮೋಹನ ಗೌಡ ಎಂಬವರ ಮನೆಯ ಕೊಟ್ಟಿಗೆ ಬಳಿ ತರಕಾರಿ ಗಿಡಗಳಿಗೆ ಹಾಕಲಾಗಿದ್ದ ಬಲೆಯೊಂದರಲ್ಲಿ ಸುಮಾರು 1.5 ಮೀ. ಉದ್ದದ ನಾಗರಹಾವೊಂದು ಸಿಲುಕಿಕೊಂಡು ಜೀವನ್ಮರಣ ಸ್ಥಿತಿಯಲ್ಲಿತ್ತು. ಹಾವು ಹಿಡಿಯುವಲ್ಲಿ ಪರಿಣತರಾದ ಕೆ.ಕೃಷ್ಣ ಭಟ್ ನಿಡ್ಲೆ ಆಗಮಿಸಿ ಹಾವನ್ನು ಬಲೆಯಿಂದ ರಕ್ಷಣಾತ್ಮಕವಾಗಿ ಹಾವನ್ನು ತೆಗೆದು ಪೆರಿಯಶಾಂತಿ ರಕ್ಷಿತಾರಣ್ಯಕ್ಕೆ ಬಿಡಲಾಯಿತು.
ಗಾಂಟಾ ಮಾರಾಟ; ಇಬ್ಬರ ಸೆರೆ
ಪುತ್ತೂರು: ಗಾಂಜಾ ಮಾರಾಟ ವ್ಯವಹಾರ ನಡೆಸುತ್ತಿದ್ದ ಇಬ್ಬರನ್ನು ಮಂಗಳವಾರ ರಾತ್ರಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರು ನಗರದ ಕೂರ್ನಡ್ಕ ಮರೀಲು ನಿವಾಸಿಗಳಾದ ತಾರಾನಾಥ ಮತ್ತು ನಿಖಿಲ್ ಬಂಧಿತರು. ಇವರು ಕೂರ್ನಡ್ಕ ಜಂಕ್ಷನ್ ಬಳಿಯಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದರು ಎನ್ನಲಾಗಿದ್ದು ಇದನ್ನು ಕಂಡ ಸ್ಥಳೀಯರು ಆರೋಪಿಗಳನ್ನು ಹಿಡಿದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸ್ ವಶಕ್ಕೊಪ್ಪಿಸಿದರು.ಪೊಲೀಸರು ಆರೋಪಿಗಳಿಂದ ಗಾಂಟಾ ಪ್ಯಾಕೆಟ್ ವಶಪಡಿಸಿಕೊಂಡಿದ್ದಾರೆ.
ಸುರತ್ಕಲ್: ಹಲ್ಲೆ, ಪ್ರತಿ ಹಲ್ಲೆ
ಮಂಗಳೂರು: ಕ್ರಿಕೆಟ್ ಪಂದ್ಯಾಟ ಬೆಟ್ಟಿಂಗ್ ವಿವಾದ ಹಿನ್ನೆಲೆಯಲ್ಲಿ ಇಜಾಝ್ ಅಹಮ್ಮದ್ (25) ಎಂಬವರ ಮೇಲೆ ಕುಳಾಯಿ ಕಾಳಿಕಾಂಬ ದೇವಸ್ಥಾನ ಬಳಿ ನಾಲ್ವರ ತಂಡ ಸೋಮವಾರ ರಾತ್ರಿ ಹಲ್ಲೆ ನಡೆಸಿದೆ. ಅನಿಲ್, ದೇವರಾಜ್, ಸುಜಿತ್ ಮತ್ತು ನಿಖಿಲ್ ಎಂಬವರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಕುಳಾಯಿ ಪ್ರೀತಿ ನಗರದ ಅನಿಲ್ ಎಂಬವರ ಮನೆಗೆ ನುಗ್ಗಿದ ರಿಯಾಝ್, ಅಫ್ರಿಯಾಜ್, ತೌಸೀಫ್ ಸಹಿತ 15 ಮಂದಿಯ ತಂಡ ಮನೆ ಹಿರಿಯ ಸದಾಶಿವ ಆಚಾರ್ಯ ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ದೇವರಾಜ್ ಎಂಬವರನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ ಎಂದು ಸುರತ್ಕಲ್ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ. ಗಾಯಾಳುಗಳು ಪದ್ಮಾವತಿ ಆಸ್ಪತ್ರೆ ಮತ್ತು ಮುಕ್ಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೃಹಿಣಿ ಮೇಲೆ ಅತ್ಯಾಚಾರ ಯತ್ನ; ದೂರು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಅಲಂತಾಯ ಗ್ರಾಮದ ಪೆರ್ನಾರು ಎಂಬಲ್ಲಿ ವಿವಾಹಿತೆಯ ಮನೆಗೆ ನುಗ್ಗಿದ ನೆರೆಮನೆಯ ಯುವಕ ಆಕೆ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಘಟನೆ ಬಗ್ಗೆ ಉಪ್ಪಿನಂಗಡಿ ಪೊಲಿಸರಿಗೆ ದೂರು ನೀಡಲಾಗಿದೆ. ವಿವಾಹಿತರಾಗಿ ಇಬ್ಬರು ಮಕ್ಕಳ ತಾಯಿಯಾಗಿರುವ ಈ ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಕುಡಿಯಲು ನೀರು ಬೇಕೆಂಬ ನೆಪದಲ್ಲಿ ಮನೆಗೆ ಬಂದ ಆಲಂತಾಯ ಗ್ರಾಮದ ಪೆರ್ನಾರು ಮನೆ ನಿವಾಸಿ ಹರೀಶ್ ಪೂಜಾರಿ (24) ಎಂಬಾತ ಮನೆಯಲ್ಲಿ ಬೇರಾರೂ ಇಲ್ಲದಿರುವುದನ್ನು ಖಚಿತಪಡಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಆತನಿಂದ ಬಿಡಿಸಿಕೊಂಡು ಮನೆಯಿಂದ ಹೊರಗೋಡಿ ಬಂದು ರಕ್ಷಣೆಗಾಗಿ ಬೊಬ್ಬೆ ಹೊಡೆದಾಗ ಆತ ಪಲಾಯನ ಮಾಡಿದ್ದಾನೆ. ಈ ವೇಳೆ ತನ್ನ ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮರದಿಂದ ಬಿದ್ದು ವ್ಯಕ್ತಿ ಸಾವು
ಮೂಲ್ಕಿ: ಮರ ಕಡಿಯುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮ ಪಂಚಾಯಿತಿನ ಕಿಲೆಂಜೂರಿನ ಪ್ರೇಮ್ನಾಥ್ ಎಂಬವರ ಜಾಗದಲ್ಲಿ ಸೋಮವಾರ ಬೆಳಗ್ಗೆ ಮರ ಕಡಿಯಲು ಆಗಮಿಸಿದ್ದ ಬಳ್ಕುಂಜೆ ಪಂಚಾಯಿತಿನ ಕರ್ನಿರೆ ನಿವಾಸಿ ಕೃಷ್ಣ (56) ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಯತಪ್ಪಿ ಮರದಿಂದ ಬಿದ್ದು ತೀವ್ರ ಗಾಯಗೊಂಡಿದ್ದರು. ಅವರನ್ನು ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಗಳವಾರ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸಿಡ್ ದಾಳಿ ಆರೋಪಿಗೆ ಜಾಮೀನು
ಪುತ್ತೂರು: ಎರಡು ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಎಂಬಲ್ಲಿ ನಡೆದ ಆಸಿಡ್ ದಾಳಿ ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದ ಮಹಿಳೆಯನ್ನು ಸುಪ್ರೀಂ ಕೋರ್ಟ್ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ತಾಲೂಕಿನ ಬನ್ನೂರು ನಿವಾಸಿ ಸುಂದರ ಪೂಜಾರಿ ಎಂಬವರ ಪತ್ನಿ ಹೇಮಲತಾ (36) ಜಾಮೀನು ಪಡೆದ ಆರೋಪಿ.
ಪ್ರಕರಣ ಹಿನ್ನೆಲೆ: 2012 ಏ.7ರಂದು ಪೆರಿಗೇರಿ ನಿವಾಸಿಗಳಾದ ಸೀತಾರಾಮ ಆಚಾರ್ಯ (61) ಹಾಗೂ ಅವರ ಪುತ್ರರಾದ ಅಮೃತೇಶ್ (43) ಮತ್ತು ರಾಜ್ಕುಮಾರ್ (23) ರಾತ್ರಿ ಬೈಕ್ನಲ್ಲಿ ತಮ್ಮ ಮನೆಗೆ ಹೋಗುತ್ತಿದ್ದ ಸಂದರ್ಭ ರಿಕ್ಷಾದಲ್ಲಿ ಆಗಮಿಸಿದ ಆರೋಪಿಗಳಾದ ಹೇಮಲತಾ, ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಪುರಷೋತ್ತಮ ಹೆಗ್ಡೆ ಎಂಬವರ ಪುತ್ರ ಮೋಹನ್ ಕುಮಾರ್ ಮತ್ತು ಶಾಂತಿಗೋಡು ನಿವಾಸಿ ಪ್ರಶಾಂತ್ ಎಂಬವರು ಸಂಪ್ಯದಲ್ಲಿ ಬೈಕ್ ತಡೆದು ನಿಲ್ಲಿಸಿ ಆಸಿಡ್ ಎರಚಿ ಕೊಲೆಗೆ ಯತ್ನಿಸಿ ಪರಾರಿಯಾಗಿರುವುದಾಗಿ ಆರೋಪಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಸಂಪ್ಯ ಪೊಲೀಸರು ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಕೋರ್ಟ್ ಮತ್ತು ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಹೇಮಲತಾ ಸುಪ್ರೀಂ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆರೋಪಿಗಳ ಪರವಾಗಿ ವಕೀಲರಾದ ನರಸಿಂಹ ಹೆಗ್ಡೆ, ಕೃಷ್ಣಪ್ರಸಾದ್ ರೈ, ರಮಾನಾಥ ರೈ ಮತ್ತು ಕುಮಾರನಾಥ ವಾದಿಸಿದ್ದರು.
ಕುಖ್ಯಾತ ಕಳ್ಳರ ಸೆರೆ
ಬೆಳ್ತಂಗಡಿ: ವಿವಿಧ ಕಡೆಗಳಲ್ಲಿ ಕಳ್ಳತನ ನಡೆಸಿದ ಇಬ್ಬರು ಕುಖ್ಯಾತ ಕಳ್ಳರನ್ನು ಇಲ್ಲಿನ ಸರ್ಕಲ್ ಇನ್ಸ್ಪೆಕ್ಟರ್ ಲಿಂಗಪ್ಪ ಪೂಜಾರಿ ಹಾಗೂ ವೇಣೂರು ಎಸ್ಐ ಅಬ್ದುಲ್ ಖಾದರ್ ಅವರ ತಂಡ ಸೋಮವಾರ ಬಂಧಿಸಿದೆ. ಬದ್ಯಾರಿನ ಇಸಾಕ್ ಹಾಗೂ ಮದ್ದಡ್ಕದ ಹಮೀದ್ ಬಂಧಿತರು. ಇವರು ಉಪಯೋಗಿಸುತ್ತಿದ್ದ ವಾಹನ ವಶಪಡಿಸಿಕೊಳ್ಳಲಾಗಿದೆ. ಪುತ್ತೂರು ನೆಲ್ಯಾಡಿಯ ಸಂತೆಕಟ್ಟೆ ಮುದ್ದಾಡಿ, ಗೇರುಕಟ್ಟೆಯ ಅಬ್ದುಲ್ ಕರೀಂ, ಬಂಟ್ವಾಳ ತಾಲೂಕು ಕಕ್ಕೆಪದವಿನ ಇಸಾಕ್ ಎಂಬವರ ಅಡಕೆ ಅಂಗಡಿ ಸೇರಿದಂತೆ 8 ಅಂಗಡಿಗಳ ಬೀಗ ಮುರಿದು ಲಕ್ಷಾಂತರ ಬೆಲೆ ಬಾಳುವ ಅಡಕೆ ಕದ್ದಿದ್ದರು ಎನ್ನಲಾಗಿದೆ. ಬಂಟ್ವಾಳ ತಾಲೂಕು ಸಿದ್ದಕಟ್ಟೆಯ ಪೆಟ್ರೋಲ್ ಪಂಪ್ಗೆಕನ್ನ ಹಾಕಿ ನಗದು ದೋಚಿದ್ದರು. 2 ಹಾಲಿನ ಸೊಸೈಟಿಗಳಲಿ ಕಳ್ಳತನ ನಡೆಸಿದ್ದರು. ಒಟ್ಟು 9 ಕಡೆ ಕಳ್ಳತನ ನಡೆಸಿದ ಕುರಿತು ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಬಂಧಿತರನ್ನು ಸೋಮವಾರ ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಲಾಗಿದೆ. ಆಪಾದಿತರನ್ನು ಹೆಚ್ಚಿನ ವಿಚಾರಣೆ ಹಾಗೂ ಕದ್ದ ವಸ್ತುಗಳ ವಶಕ್ಕಾಗಿ ಪೊಲೀಸ್ ಕಸ್ಟಡಿಗೆ ಕೇಳಲಾಗಿದೆ.