ಧಾರ್ಮಿಕ ಪ್ರಕ್ರಿಯೆಗಳ ಛೇಡಿಸುವುದು ಸರಿಯಲ್ಲ; ಮಹಮ್ಮದ್
ಬಂಟ್ವಾಳ: ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಇಸ್ಲಾಂ ಧರ್ಮದ ಧಾರ್ಮಿಕ ಪ್ರಕ್ರಿಯೆಗಳನ್ನು ಛೇಡಿಸಿರುವುದು ಸರಿಯಲ್ಲ. ಮುಸ್ಲಿಮ್ ಸಮುದಾಯ ಯಾವುದನ್ನು ಬೇಕಾದರೂ ಸಹಿಸುತ್ತದೆ. ಮುಂಜಿ, ಬುರ್ಕಾಗಳ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದರೆ ಖಂಡಿತ ಸಹಿಸುವುದಿಲ್ಲ. ಇನ್ನೊಂದು ಧರ್ಮವನ್ನು ಅವಹೇಳನಕಾರಿಯಾಗಿ ಬಿಂಬಿಸಿ, ವಿಕೃತ ಮನೋಭಾವವನ್ನು ಪ್ರದರ್ಶಿಸಿರುವುದು ಸರಿಯಲ್ಲ ಎಂದು ವಿಟ್ಲ ಫಿರ್ಕಾ ಜಮಾಅತ್ ಸಂಘಟನೆಗಳು ಹೇಳಿವೆ.
ಬುಧವಾರ ವಿಟ್ಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಪಂ. ಸದಸ್ಯ ಹಾಗೂ ಪುಣಚ ಮಸೀದಿ ಸಮಿತಿಯ ಮುಖ್ಯಸ್ಥ ಎಂ.ಎಸ್. ಮಹಮ್ಮದ್, ಪ್ರಜಾಸತ್ತಾತ್ಮಕ ಭಾರತ ದೇಶದಲ್ಲಿ ಧರ್ಮಾಧಾರಿತ ರಾಜಕೀಯ ಮಾಡಬಾರದು ಎಂದರು.
ಕೋಮು ಪ್ರಚೋದನಕಾರಿ ಭಾಷಣದ ಮೂಲಕ ಅವರು ಜಿಲ್ಲೆಯನ್ನು ಜಾತಿಯ ಗೋಡೆಯ ಮೂಲಕ ಒಡೆಯಲು ಪ್ರಯತ್ನಿಸಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.
ಖಂಡನೆ: ಉಡುಪಿಯ ಫೇಸ್ಬುಕ್ ಮತ್ತು ದೇರಳಕಟ್ಟೆಯಲ್ಲಿ ನಡೆದ ಪ್ರಕರಣವನ್ನೂ ನಾವು ಖಂಡಿಸುತ್ತೇವೆ. ಅದು ಕೂಡಾ ಧರ್ಮವಿರೋಧಿ ಚಟುವಟಿಕೆಗಳೇ. ಅಂಥವರು ಸಮಾಜಕ್ಕೆ ಗಂಡಾಂತರ ತರುವಂಥ ವ್ಯಕ್ತಿಗಳು ಎಂದು ಹೇಳಿದರು.
ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಅವರಿಗೆ ಗಲ್ಲು ಶಿಕ್ಷೆ ನೀಡುವುದಕ್ಕೂ ನಮ್ಮ ಸಹಮತವಿದೆ. ಅವರು ಮುಸಲ್ಮಾನ ಸಮುದಾಯಕ್ಕೆ ಸೇರಿರುವುದಕ್ಕೆ ಎಲ್ಲ ಮುಸಲ್ಮಾನರನ್ನೂ ಅವಹೇಳನಕಾರಿಯಾಗಿ ಬಿಂಬಿಸುವುದು ಸರಿಯಲ್ಲ ಎಂಬ ಭಾವನೆ ನಮ್ಮದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಟ್ಲ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಬಿ., ಮಾಜಿ ಅಧ್ಯಕ್ಷ ವಿ.ಎ. ರಶೀದ್ ವಿಟ್ಲ, ಇಕ್ಬಾಲ್ ಹಾನೆಸ್ಟ್, ಒಕ್ಕೆತ್ತೂರು ಮಸೀದಿ ಅಧ್ಯಕ್ಷ ವಿ.ಎಸ್. ಇಬ್ರಾಹಿಂ, ಅಳಿಕೆ ಮಸೀದಿ ಪ್ರತಿನಿಧಿ ಶೇಕ್ಆಲಿ ಸೇರಾಜೆ, ಕೋಡಪದವು ಮಸೀದಿಯ ಸಿದ್ಧೀಕ್ ಸರವು ಇದ್ದರು.