ನಿಲ್ಲಿಸಿದ್ದ ರಿಕ್ಷಾದಿಂದ ದಾಖಲೆ ಕಳವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ರಾಮಕುಂಜ ಎಂಬಲ್ಲಿ ರಿಕ್ಷಾದಿಂದ ಅದರ ದಾಖಲೆ ಪತ್ರಗಳನ್ನು ಕಳವು ಮಾಡಿದ ಬಗ್ಗೆ ಕಡಬ ಪೊಲೀಸರಿಗೆ ದೂರು ನೀಡಲಾಗಿದೆ. ವಸಂತ ಎಂಬವರು ತಮ್ಮ ರಿಕ್ಷಾವನ್ನು ಪಾರ್ಕ್ ಮಾಡಿ ಬೇರೆಡೆಗೆ ಹೋಗಿದ್ದಾಗ ಅದರಲ್ಲಿದ್ದ ದಾಖಲೆಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೀಮೆಎಣ್ಣೆ ಕುಡಿದು ಮಗು ಅಸ್ವಸ್ಥ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ರಾಮಕುಂಜ ಗ್ರಾಮದ ಹಳೇನೇರಂಕಿ ಎಂಬಲ್ಲಿ ಒಂದುವರೆ ವರ್ಷ ಪ್ರಾಯದ ಮಗು ಸೀಮೆಎಣ್ಣೆ ಕುಡಿದು ಅಸ್ವಸ್ಥಗೊಂಡ ಘಟನೆ ನಡೆದಿದೆ. ಉಮೇಶ್ ಎಂಬವರ ದಿಗಂತ್ ಅಸ್ವಸ್ಥ ಮಗು. ಬಚ್ಚಲು ಮನೆಯಲ್ಲಿ ಆಟವಾಡುತ್ತಿದ್ದಾಗ ಅಲ್ಲಿಟ್ಟಿದ್ದ ಸೀಮೆಎಣ್ಣೆಯನ್ನು ಕುಡಿದಿದ್ದಾನೆ. ಕೂಡಲೆ ಅಸ್ವಸ್ಥಗೊಂಡ ಮಗುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷದ ಹಾವು ಕಡಿದು ಮಹಿಳೆ ಅಸ್ವಸ್ಥ
ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ಎಂಬಲ್ಲಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ವಿಷದ ಹಾವು ಕಡಿದು ಅಸ್ವಸ್ಥಗೊಂಡಿದ್ದಾರೆ. ಪೆರಿಯಡ್ಕ ನಿವಾಸಿ ಹೇಮಾವತಿ ಅಸ್ವಸ್ಥ ಮಹಿಳೆ. ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಪ್ಪಿನಂಗಡಿ: ಬೈಕ್ ಚಕ್ರಕ್ಕೆ ಸಿಲುಕಿ ಸಹಸವಾರ ಗಂಭೀರ
ಉಪ್ಪಿನಂಗಡಿ: ಚಲಿಸುತ್ತಿದ್ದ ಬೈಕ್ ಚಕ್ರಕ್ಕೆ ಕಾಲು ಸಿಲುಕಿ ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ತಣ್ಣೀರುಪಂತ ಎಂಬಲ್ಲಿ ನಡೆದಿದೆ. ಇಬ್ರಾಹಿಂ ಎಂಬವರು ಬೈಕ್ನಲ್ಲಿ ಹಿಂಬದಿ ಸವಾರನಾಗಿ ಸಂಚರಿಸುತ್ತಿದ್ದ ವೇಳೆ ಅವರ ಕಾಲು ಬೈಕ್ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡರು. ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏಣಿಯಿಂದ ಬಿದ್ದು ವ್ಯಕ್ತಿಗೆ ಗಾಯ
ಉಪ್ಪಿನಂಗಡಿ: ಈದ್ ಅಂಗವಾಗಿ ಮಸೀದಿಯನ್ನು ಅಲಂಕರಿಸುತ್ತಿದ್ದಾಗ ಏಣಿಯಿಂದ ಬಿದ್ದು ಯಾಕೂಬ್ ಎಂಬವರು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕು ಉರುವಾಲುಪದವು ಎಂಬಲ್ಲಿ ನಡೆದಿದೆ. ಉರುವಾಲು ಪದವಿನ ಮಸೀದಿಯನ್ನು ಅಲಂಕರಿಸುತ್ತಿದ್ದಾಗ ಆಯತಪ್ಪಿ ಬಿದ್ದ ಯಾಕೂಬ್ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಆಲಂಕಾರು ಗ್ರಾಮದ ಸಂಕದ ಬಳಿ ನಿವಾಸಿ ಹರೀಶ್ ಪೂಜಾರಿ (27) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮನೆಯಲ್ಲಿ ತಾಯಿಯ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಭೂ ವಿವಾದದ ಹಿನ್ನೆಲೆಯಲ್ಲಿ ಮನನೊಂದು ಈ ಕೃತ್ಯ ಎಸಗಿರುವುದಾಗಿ ಮೃತರ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಕ್ವಾರಿಗೆ ದಾಳಿ, ದಂಡ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಅರಸಿನಮಕ್ಕಿ ಎಂಬಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಕಲ್ಲು ಕ್ವಾರಿಗೆ ಗಣಿ ಇಲಾಖಾಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನೆಲ್ಯಾಡಿ ಹೊರಠಾಣೆ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದ ಗಣಿ ಇಲಾಖಾಧಿಕಾರಿಗಳು, ಅನುಮತಿ ಇಲ್ಲದೆ ಕಲ್ಲು ಕ್ವಾರಿ ನಡೆಸುತ್ತಿರುವುದನ್ನು ಪತ್ತೆ ಹಚ್ಚಿ ದಂಡ ವಿಧಿಸಿ, ಇಂಥ ಘಟನೆ ಪುನರಾವರ್ತನೆಯಾಗದಂತೆ ಎಚ್ಚರಿಕೆ ನೋಟಿಸ್ ನೀಡಿದ್ದಾರೆ.
ಕಾರು- ಟ್ಯಾಂಕರ್ ಡಿಕ್ಕಿ; ಐವರಿಗೆ ಗಾಯ
ಪುತ್ತೂರು: ಮಾರುತಿ ಕಾರು ಮತ್ತು ಟ್ಯಾಂಕರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಗಾಯಗೊಂಡ ಘಟನೆ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಪುತ್ತೂರು- ಮಂಗಳೂರು ರಾಜ್ಯ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕಾರು ಚಾಲಕ, ಪೋಳ್ಯ ನಿವಾಸಿ ಮಹಮ್ಮದ್ ಆಲಿ (51), ಅವರ ಪತ್ನಿ ಝಹರಾ (44), ಸಂಬಂಧಿಕರಾದ ಅಶ್ರಫ್ (30), ಅವರ ಪತ್ನಿ ಮೈಮುನಾ(28) ಮತ್ತು ರಂಶಿನಾ (24) ಗಾಯಗೊಂಡವರು.
ಸಂಪ್ಯದಲ್ಲಿ ಈದ್ ಮಿಲಾದ್ ಸಮಾವೇಶ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಮಹಮ್ಮದ್ ಆಲಿ ಚಲಾಯಿಸುತ್ತಿದ್ದ ಕಾರು ಹಾಗೂ ಮಂಗಳೂರಿಗೆ ಸಾಗುತ್ತಿದ್ದ ಟ್ಯಾಂಕರ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಎಲ್ಲ ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಮಾರುತಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.