ಪರಿಚಿತರಿಂದಲೇ ಲೂಟಿ, ಹಲ್ಲೆ: ನಾಲ್ವರ ಬಂಧನ
ಮೂಲ್ಕಿ: ಪಣಂಬೂರಿನಿಂದ ತಂದೆಯ ನಿವೃತ್ತಿ ವೇತನದ ಹಣ ತರುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ನಾಲ್ವರು ಪರಿಚಿತರೇ ಹಲ್ಲೆ ನಡೆಸಿ, ಹಣ ದೋಚಿ ನಂತರ ಸಿಕ್ಕಿಬಿದ್ದ ಘಟನೆ ಮಂಗಳವಾರ ನಡೆದಿದೆ.
ಇಲ್ಲಿನ ಕೆ.ಎಸ್. ರಾವ್ ನಗರದ ದ.ಕ. ಜಿಲ್ಲಾ ಪಂಚಾಯಿತಿ ಶಾಲೆಯ ಹಿಂಭಾಗದಲ್ಲಿ ವಾಸವಾಗಿರುವ ಭೀಮಪ್ಪ (28) ಎಂಬವರು ಮಂಗಳವಾರ ಸಂಜೆ ತನ್ನ ತಂದೆ, ಪಣಂಬೂರಿನ ಎನ್ಎಂಪಿಟಿ ಬಂದರಿನಲ್ಲಿ ಉದ್ಯೋಗಿಯಾಗಿದ್ದ ಆನಂದಪ್ಪ ಎಂಬವರ ನಿವೃತ್ತಿ ವೇತನದ ಹಣ ರು. 40,000ವನ್ನು ಪಣಂಬೂರಿನಿಂದ ಮನೆಗೆ ತರುತ್ತಿದ್ದರು. ಈ ಸಂದರ್ಭ ಮನೆ ಸಮೀಪ ಮಾಹಿತಿ ಪಡೆದ ಪರಿಚಿತರಾದ ಮುಸ್ತಾಫ್ ಅಲಿಯಾಸ್ ಮುಸ್ತಾ, ಇರ್ಷಾದ್, ಲಕ್ಷ್ಮಣ ಮತ್ತು ಸಲ್ಮಾನ್ ಎಂಬವರು ಭೀಮಪ್ಪ ಅವರಿಂದ ಹಣ ಕಸಿದು, ಹಲ್ಲೆ ನಡೆಸಿದರು. ಬಳಿಕ ಮುಸ್ತಾಫನ ಮನೆಗೆ ಬಲವಂತವಾಗಿ ಕರೆದುಕೊಂಡು ಹೋಗಿ ಮನೆಯ ಕೋಣೆಯಲ್ಲಿ ಕೂಡಿ ಹಾಕಿ, ಮತ್ತೆ ಹಲ್ಲೆ ನಡೆಸಿ, ಹಣ ದೋಚಿ ಪರಾರಿಯಾಗಿದ್ದರು.
ತೀವ್ರ ಗಾಯಗೊಂಡ ಭೀಮಪ್ಪ ಮೂಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ನಡೆದಿದ್ದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯು ನೀಡಿದ ಮಾಹಿತಿಯಂತೆ ಮೂಲ್ಕಿ ಪೊಲೀಸರು ಮಂಗಳವಾರ ರಾತ್ರಿ ಪೂರ್ತಿ ಕಾರ್ಯಾಚಾರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದರು. ಮಾತ್ರವಲ್ಲದೆ, ಭೀಮಪ್ಪ ಅವರಿಂದ ದೋಚಲಾದ ರು. 40,000 ನಗದು ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಮೂಲ್ಕಿ ಪೊಲೀಸ್ ಠಾಣೆಗೆ ಭೀಮಪ್ಪ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಬುಧವಾರ ಸರ್ಕಾರಿ ರಜೆಯಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಮೂಲ್ಕಿ ಪೊಲೀಸರು ಮೂಡುಬಿದಿರೆ ನ್ಯಾಯಾಲಯದ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.