ಪಲ್ಲಕ್ಕಿ ಇರುವುದೇ ಹೊರಲು, ಟ್ಯಾಬ್ಲೋದಲ್ಲಿಡಲಲ್ಲ!
ಉಡುಪಿ: ಮತ್ತೆ ಪಲ್ಲಕ್ಕಿ ವಿವಾದ ಆರಂಭವಾಗಿದೆ!
ಜ.18ರಂದು ಮುಂಜಾನೆ ನಡೆಯುವ ಉಡುಪಿ ಪರ್ಯಾಯೋತ್ಸವದ ಸಂದರ್ಭದಲ್ಲಿ ಅಷ್ಟ ಮಠಾಧೀಶರು ಭಕ್ತರು ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗುವ ಬಗ್ಗೆ ಪರ-ವಿರೋಧ ವಿವಾದ ಹುಟ್ಟಿಕೊಂಡಿದೆ.
'ಪಲ್ಲಕ್ಕಿ ಇರುವುದೇ ಹೊತ್ತುಕೊಂಡು ಹೋಗುವುದಕ್ಕೆ, ಟ್ಯಾಬ್ಲೋದಲ್ಲಿಟ್ಟು ಮೆರವಣಿಗೆ ಮಾಡುವುದಕ್ಕಲ್ಲ' ಎಂದಿರುವ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ, ತಾವು ಪರ್ಯಾಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ.
ಪೇಜಾವರ ಶ್ರೀ ಹೇಳಿಕೆ: ಉಡುಪಿಯ ಪರ್ಯಾಯೋತ್ಸವದ ಸಂದರ್ಭದಲ್ಲಿ ಅಷ್ಟ ಮಠಾಧೀಶರು ಭಕ್ತರು ಹೊರುವ ಅಲಂಕೃತ ಪಲ್ಲಕ್ಕಿಯಲ್ಲಿ ಸುಮಾರು 1 ಕಿ.ಮೀ. ದೂರ ಮೆರವಣಿಗೆಯಲ್ಲಿ ಸಾಗುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಇತ್ತೀಚೆಗೆ ಬಾಳೆಹೊನ್ನೂರು ರಂಭಾಪುರಿ ಮಠದ ಅಡ್ಡಪಲ್ಲಕ್ಕಿ ವಿವಾದದ ನಂತರ ಪೇಜಾವರ ಶ್ರೀಗಳು ಇನ್ನು ಮುಂದೆ ಉಡುಪಿಯ ಪರ್ಯಾಯೋತ್ಸವದಲ್ಲಿ ಮಾನವರು ಹೊರುವ ಪಲ್ಲಕ್ಕಿಯಲ್ಲಿ ತಾನು ಕೂರುವುದಿಲ್ಲ, ಇದಕ್ಕೆ ಇತರ ಮಠಾಧೀಶರು ಸಹಮತ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಎಲ್ಲಾ ಅಷ್ಟಮಠಗಳ ಪಲ್ಲಕ್ಕಿಗಳನ್ನು ತೆರೆದ ವಾಹನದಲ್ಲಿಟ್ಟುಕೊಂಡು ತಾವು ಅದರಲ್ಲಿ ಕುಳಿತು ಮೆರವಣಿಗೆಯಲ್ಲಿ ಬರುವುದಾಗಿ ಹೇಳಿದ್ದರು.
ಕೈಬಿಡುವುದು ಸರಿಯಲ್ಲ: ಆದರೆ ಈ ಹಠಾತ್ ಸಂಪ್ರದಾಯ ಮುರಿಯುವ ನಿರ್ಣಯದ ಬಗ್ಗೆ ಅಷ್ಟ ಮಠಗಳಲ್ಲೊಂದಾದ ಶಿರೂರು ಮಠಾಧೀಶರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಠಾಧೀಶರು ಕುಳಿತುಕೊಳ್ಳುವ ಪಲ್ಲಕ್ಕಿಯನ್ನು ಭಕ್ತರು ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಉಡುಪಿಯಲ್ಲಿ ಪರ್ಯಾಯೋತ್ಸವದ ಸಂದರ್ಭ ಒಂದು ಸಮುದಾಯದ (ಮೊಗವೀರರು) ಭಕ್ತಾಭಿಮಾನಿಗಳು ಪಲ್ಲಕ್ಕಿ ಹೊರುವುದು ಸಂಪ್ರದಾಯ. ಪ್ರಸ್ತುತ ಪಲ್ಲಕ್ಕಿ ಹೊರುವುದಕ್ಕೆ ಈ ಸಮುದಾಯದವರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ, ಇನ್ನು ಮುಂದೆ ತಾವ್ಯಾರೂ ಪಲ್ಲಕ್ಕಿ ಹೊರುವುದಿಲ್ಲ ಎಂದು ಅವರ್ಯಾರೂ ಹೇಳಿಲ್ಲ. ಹಾಗಿರುವಾಗ ಈ ರೀತಿ ಏಕಾಏಕಿ ಭಕ್ತರು ಪಲ್ಲಕ್ಕಿ ಹೊರುವ ಸಂಪ್ರದಾಯ ಕೈಬಿಡುವುದು ಸರಿಯಲ್ಲ. ಒಂದು ವೇಳೆ ಪಲ್ಲಕ್ಕಿ ಹೊರುವವರು ಇನ್ನು ಮುಂದೆ ಹೊರುವುದಿಲ್ಲ ಎಂದರೆ ತಮ್ಮ ಅಭ್ಯಂತರ ಇಲ್ಲ, ಅವರನ್ನು ತಾವು ಒತ್ತಾಯ ಮಾಡುವುದಿಲ್ಲ ಎಂದು ಶಿರೂರು ಶ್ರೀಗಳು ಹೇಳಿದ್ದಾರೆ.
ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಿಲ್ಲ: ಈ ಬಾರಿಯ ಪರ್ಯಾಯೋತ್ಸವದಲ್ಲಿ ಪಲ್ಲಕ್ಕಿಗಳನ್ನು ತೆರೆದ ವಾಹನದಲ್ಲಿಟ್ಟು ಅದರಲ್ಲಿ ಮಠಾಧೀಶರು ಕುಳಿತುಕೊಂಡು ಮೆರವಣಿಗೆ ಬರುವುದಕ್ಕೆ ತಮ್ಮ ಸಮ್ಮತಿ ಇಲ್ಲ. ಪಲ್ಲಕ್ಕಿ ಇರುವುದೇ ಹೊರುವುದಕ್ಕಾಗಿ, ಆದ್ದರಿಂದ ಒಂದೋ ಭಕ್ತರು ಹೊತ್ತ ಪಲ್ಲಕ್ಕಿಯಲ್ಲಿ ಬರಬೇಕು, ಇಲ್ಲದಿದ್ದಲ್ಲಿ ಖಾಲಿ ಪಲ್ಲಕ್ಕಿಯನ್ನು ವಾಹನದಲ್ಲಿಟ್ಟುಕೊಂಡು ತರಬೇಕು. ಪಲ್ಲಕ್ಕಿ ಹೊರುವ ವ್ಯವಸ್ಥೆ ಇಲ್ಲದಿದ್ದಲ್ಲಿ ತಾವು ಪರ್ಯಾಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಇತರ ಮಠಾಧೀಶರು ಭಾಗವಹಿಸುವುದಕ್ಕೆ ತಮ್ಮ ಆಕ್ಷೇಪ ಇಲ್ಲ ಎಂದಿದ್ದಾರೆ. ಆದರೆ, ಎಲ್ಲಾ ಅಷ್ಟಮಠಾಧೀಶರು ಒಂದೇ ಟ್ಯಾಬ್ಲೋದಲ್ಲಿ ಕುಳಿತು ಮೆರವಣಿಗೆಯಲ್ಲಿ ಆಗಮಿಸುವುದಾದರೆ ಅದಕ್ಕೆ ತನ್ನ ಬೆಂಬಲವಿದೆ ಹಾಗೂ ತಾನೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಾಗ ಶಿರೂರು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.