ಬೀಚ್ನಲ್ಲಿ ಭಿನ್ನ ಕೋಮಿನ ಜೋಡಿ ಸುತ್ತಾಟ: ನೈತಿಕ ಪೊಲೀಸರ ಎಚ್ಚರಿಕೆ
ಮಂಗಳೂರು: ಸುರತ್ಕಲ್ ಎನ್ಐಟಿಕೆ ಬೀಚ್, ಪೇಟೆಯಲ್ಲಿ ಸುತ್ತಾಡುತ್ತಿದ್ದ ದೇರಳಕಟ್ಟೆಯ ಕಂಪೂಟ್ಯರ್ ಸಾಯನ್ಸ್ ವ್ಯಾಸಂಗ ಮಾಡುತ್ತಿರುವ ಭಿನ್ನ ಕೋಮಿನ ಜೋಡಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿ ನೌಷಾದ್ನನ್ನು ಸುರತ್ಕಲ್ ಪೊಲೀಸರಿಗೆ ಒಪ್ಪಿಸಿದರೆ, ವಿದ್ಯಾರ್ಥಿನಿ ಅಘನಾಶಿನಿ (ಹೆಸರು ಬದಲಿಸಲಾಗಿದೆ)ಯ ಹೆತ್ತವರಿಗೆ ಕರೆ ಮಾಡಿದ್ದು, ಸಹೋದರ ಬಂದು ಮನೆಗೆ ಕರೆದುಕೊಂಡು ಹೋಗಿದ್ದಾನೆ.
ವಿದ್ಯಾರ್ಥಿನಿ ವಿಟ್ಲ ಬಿಜೆಪಿ ಪ್ರಮುಖರ ಕುಟುಂಬಕ್ಕೆ ಸೇರಿದವಳು. ವಿದ್ಯಾರ್ಥಿ ಬಜಪೆ ವಿದ್ಯಾರ್ಥಿ ನೌಷಾದ್. ವಿದ್ಯಾರ್ಥಿನಿ ದೇರಳಕಟ್ಟೆ ಕಂಪ್ಯೂಟರ್ ಸಾಯನ್ಸ್ 4ನೇ ವರ್ಷದ ವಿದ್ಯಾರ್ಥಿನಿ. ಯುವಕ 3ನೇ ವರ್ಷದ ವಿದ್ಯಾರ್ಥಿ. ಮಕರ ಸಂಕ್ರಾಂತಿ ಮತ್ತು ಈದ್ ಮಿಲಾದ್ ಪ್ರಯುಕ್ತ ಕಾಲೇಜ್ಗೆ ರಜೆ ಸಾರಲಾಗಿತ್ತು. ಇಬ್ಬರು ಎನ್ಟಿಕೆ ಬೀಚ್ನಲ್ಲಿ ಬೆಳಗ್ಗೆ ಸ್ವಚ್ಛಂದವಾಗಿ ಸುತ್ತಾಡುತ್ತಿದ್ದರು. ಪೇಟೆಯಲ್ಲಿಯೂ ಕಾಣಿಸಿಕೊಂಡಿದ್ದರು. ಇಬ್ಬರ ಚಲನವಲನ ಬಗ್ಗೆ ಸಂಶಯಗೊಂಡ ಸ್ಥಳೀಯ 'ನೈತಿಕ ಪೊಲೀಸರು' ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಸುರತ್ಕಲ್ ಲಾಡ್ಜ್ಗೆ ಇಬ್ಬರು ಹೋಗಿದ್ದರು, ವಾಪಸ್ ಬರುವಾಗ ನೌಷಾದ್ ಒಬ್ಬನೇ ಬಂದಿದ್ದ. ಆಗ ಸಂಶಯಗೊಂಡು ವಿಚಾರಣೆ ನಡೆಸಿ ಕತ್ತಿನ ಪಟ್ಟಿ ಹಿಡಿದು ಗದರಿ ಹಲ್ಲೆ ನಡೆಸಿರುವುದಾಗಿ ಸ್ಥಳೀಯರು ಹೇಳುತ್ತಾರೆ.