ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವೈಭವದ ಚೂರ್ಣೋತ್ಸವ

Rashmi Kasaragodu
Updated On : 16 Jan 2014, 11:44 am

ಉಡುಪಿ:  ಮಕರ ಸಂಕ್ರಾಂತಿಯ ಮರುದಿನ ಉಡುಪಿಯ ಕೃಷ್ಣ ಮಠದಲ್ಲಿ ನಡೆಯುವ ಹಗಲು ಉತ್ಸವ ಯಾನೆ ಸುವರ್ಣೋತ್ಸವ ಯಾನೆ ಚೂರ್ಣೋತ್ಸವವು ಬುಧವಾರ ವೈಭವದಿಂದ ನಡೆಯಿತು.
ಈ ಉತ್ಸವದಲ್ಲಿ ಸಾವಿರಾರು ಮಂದಿ ಭಕ್ತಾಭಿಮಾನಿಗಳು ಭಾಗವಹಿಸಿ ರಥವನ್ನು ಎಳೆದು ಭಕ್ತಿ ಮೆರೆದರು.
ನಿರ್ಗಮನ ಪರ್ಯಾಯ ಸೋದೆ ಶ್ರೀ ವಿಶ್ವವಲ್ಲಭ ತೀರ್ಥರ ನೇತೃತ್ವದಲ್ಲಿ ನಡೆದ ಈ ರಥೋತ್ಸವದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು, ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರು, ಕೃಷ್ಣಾಪುರ ಮಠದ ಶ್ರೀ ವಿಶ್ವಪ್ರಿಯ ತೀರ್ಥರು, ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು, ಭಾವಿ ಪರ್ಯಾಯ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥರು ಭಾಗವಹಿಸಿದ್ದರು. ಬೆಳಗ್ಗೆ 9.30ಕ್ಕೆ ಸಾವಿರಾರು ಮಂದಿ ಕೃಷ್ಣ ಭಕ್ತರ ಜೈಜೈಕಾರದ ನಡುವೆ ಸೋದೆ ಶ್ರೀಗಳು ಕೃಷ್ಣನ ವಿಗ್ರಹ ಮೂರ್ತಿಯನ್ನು ಬ್ರಹ್ಮ ರಥಾರೋಹಣ ನಡೆಸಿದರು. ನಂತರ ರಥದಲ್ಲಿ ಇತರ ಮಠಾಧೀಶರೊಂದಿಗೆ ಪೂಜೆ ಸಲ್ಲಿಸಿ, ವಿವಿಧ ಪ್ರಸಾದ ಭಕ್ಷ್ಯಗಳನ್ನು ನೈವೇದ್ಯ ಮಾಡಿ, ಆ ಪ್ರಸಾದವನ್ನು ನೆರೆದ ಭಕ್ತರಿಗೆ ವಿತರಿಸಿದರು.
ನಂತರ ರಥೋತ್ಸವ ನಡೆಯಿತು, ಭಕ್ತರು ಭಕ್ತಿ ಉತ್ಸಾಹದಿಂದ ರಥವನ್ನು ರಥಬೀದಿಯಲ್ಲಿ ಒಂದು ಸುತ್ತು ಪ್ರದಕ್ಷಿಣೆ ನಡೆಸಿದರು. ಉತ್ಸವದ ಕೊನೆಯಲ್ಲಿ ಎಲ್ಲಾ ಮಠಾಧೀಶರ ಉಪಸ್ಥಿತಿಯಲ್ಲಿ ಕೃಷ್ಣನ ಉತ್ಸವ ಮೂರ್ತಿಗೆ ಮಧ್ವ ಸರೋವರದಲ್ಲಿ ಅವಭೃತ ಸ್ನಾನ ನಡೆಸಿದರು. ಈ ಬಾರಿ ಪರ್ಯಾಯೋತ್ಸವ ನಡೆಯಲಿರುವುದರಿಂದ ಅದಕ್ಕಾಗಿ ಆಗಮಿಸಿದ್ದ ವಿದೇಶಿ ಪ್ರವಾಸಿಗರು ಹಗಲು ಉತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement