ಇಂದು, ನಾಳೆ ಸಂಚಾರ ಬದಲಾವಣೆ
ಉಡುಪಿ: ಪರ್ಯಾಯ ಉತ್ಸವ ಪ್ರಯುಕ್ತ ಶುಕ್ರವಾರ ಸಂಜೆ 4 ಗಂಟೆಯಿಂದ ಶನಿವಾರ ಬೆಳಗ್ಗೆ 8 ಗಂಟೆ ವರೆಗೆ ಉಡುಪಿ ನಗರಕ್ಕೆ ಬರುವ ಮತ್ತು ನಗರದಿಂದ ಹೊರಹೋಗುವ ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಮಂಗಳೂರು, ಅಂಬಲ್ಪಾಡಿ ಕಡೆಯಿಂದ ಉಡುಪಿ ನಗರಕ್ಕೆ ಬರುವ ಎಲ್ಲಾ ಬಸ್ಗಳು ನೇರವಾಗಿ ರಾ.ಹೆ. 66ರಲ್ಲಿ ಸಂಚರಿಸಿ, ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವುದು. ಉಡುಪಿ ನಗರದ ಸರ್ವಿಸ್ ಹಾಗೂ ಸಿಟಿ ಬಸ್ ನಿಲ್ದಾಣದಿಂದ ಹೊರ ಹೋಗುವ ಎಲ್ಲಾ ಬಸ್ಗಳು ಬನ್ನಂಜೆ ಮಾರ್ಗವಾಗಿ ಸಂಚರಿಸಿ ಕರಾವಳಿ ಜಂಕ್ಷನ್ನಿಂದ ಮಂಗಳೂರು, ಮಲ್ಪೆ, ಕುಂದಾಪುರ ಕಡೆಗೆ ಸಂಚರಿಸುವುದು. ಶುಕ್ರವಾರ ಸಂಜೆ 4ರಿಂದ ಶನಿವಾರ ಬೆಳಗ್ಗೆ 8ರ ವರೆಗೆ ನಗರದ ಕಿನ್ನಿಮೂಲ್ಕಿ, ಜೋಡುಕಟ್ಟೆ, ಲಯನ್ಸ್ ವೃತ್ತ, ಕೋರ್ಟ್ ರಸ್ತೆ, ಡಯಾನ ಜಂಕ್ಷನ್, ಕೆ.ಎಂ. ಮಾರ್ಗ, ಹನುಮಾನ್ ಜಂಕ್ಷನ್, ಸಂಸ್ಕೃತ ಕಾಲೇಜ್, ಕನಕದಾಸ ರಸ್ತೆ, ಬಡಗುಪೇಟೆ ರಸ್ತೆ, ಚಿತ್ತರಂಜನ್ ವೃತ್ತ, ಮಿತ್ರಾ ಆಸ್ಪತ್ರೆ ರಸ್ತೆ, ತೆಂಕುಪೇಟೆ ಮತ್ತು ರಥಬೀದಿಗಳಲ್ಲಿ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.