ಕಾಣಿಯೂರು ಮೂಲ ಮಠದಲ್ಲಿ ಸಂಭ್ರಮದ ವಾತಾವರಣ
ಪುತ್ತೂರು: ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರ ಪರ್ಯಾಯದ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಮೂಲ ಮಠವಾದ ಸುಮಾರು ಎಂಟು ನೂರು ವರ್ಷಗಳ ಇತಿಹಾಸವಿದೆ ಎನ್ನಲಾದ ಪುತ್ತೂರು ತಾಲೂಕಿನ ಕಾಣಿಯೂರು ಮಠದಲ್ಲಿಯೂ ಸಂಭ್ರಮದ ವಾತಾವರಣ ನೆಲೆಗೊಂಡಿದೆ. ಗುರುವಾರ ಕಾಣಿಯೂರು ಮಠದಿಂದ ಉಡುಪಿ ಪರ್ಯಾಯಕ್ಕೆ ಹೊರೆ ಕಾಣಿಕೆ ಸಂದಾಯವಾಗಿದೆ.
ಪುತ್ತೂರಿನಿಂದ ಕಾಣಿಯೂರು- ಸುಬ್ರಹ್ಮಣ್ಯ ರಸ್ತೆಯ ಪೇಟೆಯ ಸಮೀಪದಲ್ಲೇ ಎಡಬದಿಯಲ್ಲಿ ಅಷ್ಠ ಮಠಗಳಲ್ಲಿ ಒಂದಾಗಿರುವ ಕಾಣಿಯೂರು ಮಠವಿದೆ. ಎಂಟುನೂರು ವರ್ಷಗಳ ಹಿಂದೆ ಆನಂದ ತೀರ್ಥ ಭಗವಾತ್ಪಾದಾಚಾರ್ಯ ಅವರಿಂದ ಸ್ಥಾಪಿತವಾದ ಕಾಣಿಯೂರು ಮಠವು ಒಂದು ಪ್ರಮುಖ ಸಂಸ್ಥಾನ ಎಂಬುವುದು ಇತಿಹಾಸ. ಕಾಣಿಯೂರು ಮಠದಲ್ಲಿ ನರಸಿಂಹ ದೇವಾಲಯವಿದೆ. ಮಠದ ಹತ್ತಿರವೇ ಕಣ್ವ ಋಷಿಗಳ ಹೆಸರು ಸಾರುವ ಕಣ್ವ ಕರೆಯಿದೆ. ನರಸಿಂಹ ದೇವಾಲಯವಿದೆ. ನರಂಸಿಹ ದೇವರ, ಶಿವವಾಹಿನಿ ಅಮ್ಮ, ಮುಖ್ಯ ಪ್ರಾಣ ದೇವರ ಆರಾಧನೆ, ನಿತ್ಯ ಪೂಜಾ ಕಾರ್ಯಗಳು ಇಲ್ಲಿ ನಡೆಯುತ್ತವೆ. ಇಲ್ಲಿ ದಿನವೊಂದಕ್ಕೆ ಐದು ಕಿಲೋ ಅಕ್ಕಿಯ ನೈವೇದ್ಯ ತಯಾರಿಸಿ ದೇವರಿಗೆ ಅಪಿಎಸಲಾಗುತ್ತಿದೆ. ಮಠದ ವ್ಯಾಪ್ತಿಯಲ್ಲಿ 15 ಗೋವುಗಳಿರುವ ಗೋಶಾಲೆಯೊಂದಿದೆ. 10 ಎಕರೆ ಅಡಕೆ ತೋಟ, ನಾಲ್ಕು ಎಕರೆ ರಬ್ಬರ್ ತೋಟ ಈ ಮಠದ ಆದಾಯದ ಮೂಲ.
ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಕಾಣಿಯೂರಿನ ಮೂಲ ಮಠದಲ್ಲಿ ವಿಧಿವಶರಾಗಿರುವ 18, 19, 20, 21, 26ನೇ ಯತಿಗಳ ವೃಂದಾವನ ಕಾಣಿಯೂರಿನಲ್ಲಿದೆ. ಕಾಣಿಯೂರು ಮಠದ ಪರಂಪರೆಯಲ್ಲಿ ಹಲವರು ಮಹಾ ತಪಸ್ವಿಗಳು, ಸಾಧಕರು ಸಮಾಜಕ್ಕೆ ಮಹತ್ವಪೂರ್ಣವಾದ ಕೊಡುಗೆ ನೀಡುತ್ತಿದ್ದಾರೆ. ಒಂದನೆಯ ಯತಿ ಶ್ರೀರಾಮ ತೀರ್ಥರು ಪರಮ ಭಗವದ್ಭಕ್ತರಾಗಿದ್ದರು. ಇವರಿಗೆ ಶ್ರೀ ಮಧ್ವಾಚಾರ್ಯರು ಶಾಶ್ವತ ಆರಾಧನೆಗಾಗಿ ನರಸಿಂಹ ದೇವರನ್ನು ಅನುಗ್ರಹಿಸಿದ್ದರು ಎಂಬುವುದು ಇಲ್ಲಿನ ಪ್ರತೀತಿ.
ಕಣ್ವರು ವಾಸಿಸಿದ ಊರೇ ಕಾಣಿಯೂರು: ಹಿಂದೊಮ್ಮೆ ಪುಣ್ಯ ಕ್ಷೇತ್ರಗಳ ಭೇಟಿಗಾಗಿ ಕಣ್ವ ಋಷಿಗಳು ಕಾಣಿಯೂರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಆಶ್ಚರ್ಯವೊಂದು ಕಾದಿತ್ತು. ಇಲ್ಲಿನ ಕೆರೆಯಲ್ಲಿ ಹುಲಿ ಮತ್ತು ದನ ನೀರು ಕುಡಿದು ಜೊತೆಯಾಗಿ ವಿಶ್ರಮಿಸಿದ್ದವಂತೆ. ಇದರಿಂದ ಈ ಸ್ಥಳದ ಮಹಿಮೆಯನ್ನು ಅರಿತುಕೊಂಡ ಕಣ್ವರು ಬಳಿಕ ದೇವಾಲಯದಲ್ಲಿ 16 ಕೈಗಳ ನರಸಿಂಹ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾ ಬಹಳ ಕಾಲ ಅಲ್ಲಿ ವಾಸವಾಗಿದ್ದರು. ಬಳಿಕ ತಮ್ಮ ಶಿಷ್ಯರಿಗೆ ಪೂಜೆ ಸಲ್ಲಿಸುತ್ತಾ ಬರುವಂತೆ ನಿರ್ದೇಶಿಸಿದ್ದರು. ಕಣ್ವರು ವಾಸವಾಗಿದ್ದ ಈ ಊರು ಕಾಲ ಕ್ರಮೇಣ ಕಾಣಿಯೂರು ಆಯಿತು ಎಂಬುದು ಸ್ಥಳ ಪುರಾಣ.
ಶ್ರೀರಾಮ ತೀರ್ಥ ಶ್ರೀಪಾದರ ಪರಂಪರೆಯಲ್ಲಿ ಹದಿಮೂರನೆಯವರಾದ ವೇದಪತಿ ತೀರ್ಥರು ಯಾತ್ರಾ ನಿಮಿತ್ತ ಕಾಣಿಯೂರಿಗೆ ಬಂದು ಕ್ಷೇತ್ರದಲ್ಲಿದ್ದ ಸಂದರ್ಭದಲ್ಲಿ ಅವರ ತಪೋ ಮಹಿಮೆಯ ವಾರ್ತೆ ಬೆಳ್ಳಾರೆಯ ಅರಸರಿಗೆ ತಲುಪಿತ್ತಂತೆ. ಆ ಅರಸರಿಗೆ ಯಾವ ವೈದ್ಯರಿಂದಲೂ ಔಷಧಿ ಮಾಡಿದರೂ ಗುಣಪಡಿಸಲಾಗದ ಮೈ ಉರಿಯ ಕಾಯಿಲೆಯಿತ್ತಂತೆ. ಈ ಹಿನ್ನೆಲೆಯಲ್ಲಿ ಅರಸರು ಕಾಣಿಯೂರಿಗೆ ಬಂದು ವೇದಪತಿ ತೀರ್ಥರಲ್ಲಿ ರೋಗವನ್ನು ಗುಣಪಡಿಸುವಂತೆ ಕೇಳಿಕೊಂಡಿದ್ದರಂತೆ. ಆಗ ಯತಿವರ್ಯರು ಅರಸರ ರೋಗವನ್ನು ತಮ್ಮ ತಪಸ್ಸಿನ ಶಕ್ತಿಯಿಂದ ಗುಣಪಡಪಿಸಿದ್ದರಂತೆ. ಇದರಿಂದಾಗಿ ಸಂತೃಪ್ತನಾದ ಅರಸ ತನ್ನ ಆಳ್ವಿಕೆಗೆ ಒಳಪಟ್ಟ ಕಾಣಿಯೂರು ಗ್ರಾಮದ ಜೊತೆಗೆ ಹದಿನಾರು ಕೈಗಳ ನರಸಿಂಹ ದೇವಾಲಯವನ್ನು ನಿರ್ಮಿಸಿ ಸ್ವಾಮಿಯವರಿಗೆ ಅರ್ಪಿಸಿದರು ಎಂಬ ಪ್ರತೀತಿಯೂ ಇದೆ.
ಈ ಮಹಾಯತಿಗಳು ಊರಿನ ಮಾರಿ ಗಂಡಾಂತರಗಳನ್ನು ತಪ್ಪಿಸಲು ಶ್ರೀ ಚಕ್ರವನ್ನು ಬರೆದು ದ್ವಿಭುಜೆಯಾದ ಶಿವವಾಹಿನಿ ಅಮ್ಮನವರನ್ನು ಸ್ಥಾಪಿಸಿದರು. ಅಲ್ಲದೆ ಮುಖ್ಯಪ್ರಾಣ ದೇವರನ್ನೂ ಪ್ರತಿಷ್ಠಾಪಿಸಿ ರಂಗ ಪೂಜೆ, ಪುನಶ್ಚರಣೆ ಮೊದಲಾದ ಕೈಂಕರ್ಯಗಳನ್ನು ಆರಂಭಿಸಿದರು ಎಂಬುವುದು ಇಲ್ಲಿನ ಕ್ಷೇತ್ರ ಇತಿಹಾಸ.
ಪ್ರತಿ ವರ್ಷ ನರಸಿಂಹ ಜಯಂತಿಯಂದು ಸ್ವಾಮೀಜಿಯವರು ಎರಡು ದಿನಗಳ ಕಾಲ ಮಠದಲ್ಲಿದ್ದು ಪೂಜೆ ನೈಮಿತ್ಯಾಧಿ ಕಾರ್ಯಗಳನ್ನು ನೆರವೇರಿಸುತ್ತಾರೆ. ಭಕ್ತರಿಗೆ ಆಶೀರ್ವಚನ ನೀಡುತ್ತಾರೆ.
ಊರವರಿಗೆ ಸಮಾರಾಧನೆ ನಡೆಯುತ್ತದೆ. ಸ್ವಾಮೀಜಿಯವರು ಬಿಡುವಿನ ಸಂದರ್ಭದಲ್ಲಿ 15 ದಿನಕ್ಕೂ ಹೆಚ್ಚು ದಿನ ಇಲ್ಲಿ ತಂಗುವುದು ವಾಡಿಕೆ.
ಮಠದ ಯತಿಗಳು: 1238ರಿಂದ ಇಲ್ಲಿ ಯತಿ ಪರಂಪರೆ ಪ್ರಾರಂಭವಾಗಿದೆ. ಪ್ರಥಮ ಯತಿಯಾಗಿ ಶ್ರೀ ರಾಮತೀರ್ಥ 2316ರ ತನಕ ಇದ್ದರು. ಬಳಿಕ ರಘುನಾಥ ತೀರ್ಥರು, ರಘುಪತಿ ತೀರ್ಥರು, ರಘುನಂದನ ತೀರ್ಥರು, ಯಧುನಂದನ ತೀರ್ಥರು, ವಿಶ್ವಾತ್ಮ ತೀರ್ಥರು, ವಿಶ್ವನಾಥ ತೀರ್ಥರು, ವೇದಗರ್ಭ ತೀರ್ಥರು, ವಾಗೀಶ ತೀರ್ಥರು, ವರದಪತಿ ತೀರ್ಥರು, ವಿಶ್ವಪತಿ ತೀರ್ಥರು, ವಿಶ್ವಮೂರ್ತಿ ತೀರ್ಥರು, ವೇದಪತಿ ತೀರ್ಥರು, ವೇದರಾಜ ತೀರ್ಥರು, ವಿದ್ಯಾಧೀಶ ತೀರ್ಥರು, ವಿಭುದೇಶ ತೀರ್ಥರು, ವಾರಿಜಾಕ್ಷ ತೀರ್ಥರು, ವಿಶ್ವೇಂದ್ರ ತೀರ್ಥರು, ವಿಭುದ ವಣದ್ಯ ತೀರ್ಥರು, ವಿಭುದಾಧಿರಾಜ ತೀರ್ಥರು, ವಿದ್ಯಾರಾಜ ತೀರ್ಥರು, ವಿಬುಧ ಪ್ರಿಯ ತೀರ್ಥರು, ವಿದ್ಯಾಸಾಗರ ತೀರ್ಥರು, ವಾಸುದೇವ ತೀರ್ಥರು, ವಿದ್ಯಾಪತಿ ತೀರ್ಥರು, ವಾಮನ ತೀರ್ಥರು, ವಿದ್ಯಾನಿಧಿ ತೀರ್ಥರು, ವಿದ್ಯಾ ಸಮುದ್ರ ತೀರ್ಥರು, ವಿದ್ಯಾವಾರಿನಿಧಿ ತೀರ್ಥರು ಹೀಗೆ ಕ್ರಮವಾಗಿ ಇಲ್ಲಿ ಯತಿ ಪರಪರಂಪರೆ ಮುಂದುವರಿದುಕೊಂಡು ಬಂದಿದ್ದು, ಇದೀಗ ಈ ಮಠದ ವಿದ್ಯಾವಲ್ಲಭ ತೀರ್ಥರ ಪರ್ಯಾಯ ಕಾಣಿಯೂರು ಮಠಕ್ಕೆ ವಿಶೇಷತೆ ತಂದುಕೊಟ್ಟಿದೆ. ಅಲ್ಲದೆ ಕಾಣಿಯೂರಿನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.