ನ್ಯಾಯ ಸಿಗದಿದ್ದರೆ 'ಬೆಂಗಳೂರು ಚಲೋ'; ಎಂಡೋ ಸಂತ್ರಸ್ತರು
ಉಪ್ಪಿನಂಗಡಿ: ಎಂಡೋ ಪೀಡಿತರಿಗೆ ನ್ಯಾಯ ನೀಡಲು ಸರ್ಕಾರ ನಿರಾಕರಿಸಿದರೆ ಮಾರ್ಚ್ ಮೊದಲ ವಾರ ಕೊಕ್ಕಡ ಎಂಡೋ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಬೆಂಗಳೂರು ಚಲೋ ಚಳವಳಿ ನಡೆಸಲಾಗುವುದೆಂದು ಎಂಡೋ ವಿರೋಧಿ ಹೋರಾಟಗಾರರ ಶ್ರೀಧರ ಗೌಡ ಕೆಂಗುಡೇಲು ಎಚ್ಚರಿಸಿದ್ದಾರೆ.
ಗುರುವಾರ ಎಂಡೋ ಸಂತ್ರಸ್ತರ ಹೋರಾಟ ಸಮಿತಿ ಆಶ್ರಯದಲ್ಲಿ ಸೌತ್ತಡ್ಕ ಕ್ಷೇತ್ರದಲ್ಲಿ ನಡೆದ ಎಂಡೋ ಸಂತ್ರಸ್ತರ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಅವರು ಪ್ರಕಟಿಸಿದರು.
ಭಾರಿ ಸಂಖ್ಯೆಯ ಎಂಡೋ ಸಂತ್ರಸ್ತರು ಭಾಗವಹಿಸಿದ್ದ ಈ ಸಭೆಯಲ್ಲಿ ಅರ್ಧದಷ್ಟು ಮಂದಿ ತಮ್ಮನ್ನು ಎಂಡೋಪೀಡಿತರ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಆಪಾದಿಸಿದರು.
ಬಹಳಷ್ಟು ಮಂದಿ ಹಾಸಿಗೆಯಲ್ಲಿ ಮಲಗಿದ ಸ್ಥಿತಿಯಲ್ಲಿದ್ದರೂ ಅವರ ಹೆಸರನ್ನೂ ಪೀಡಿತರ ಪಟ್ಟಿಯಲ್ಲಿ ಸೇರಿಸದಿರುವುದು, ಒಟ್ಟು ಇಡೀ ಸಮೀಕ್ಷೆ ಕಾಟಾಚಾರದ ರೀತಿಯಲ್ಲಿ ನಡೆದಿದೆ, ಎಂಡೋ ಪೀಡಿತರ ನರಕ ಸದೃಶ ಬದುಕಿನಲ್ಲಿ ರಾಜಕೀಯ ಮಾಡಿ ಅವರ ಮನ ನೋಯಿಸುವ ಕಾರ್ಯ ತಕ್ಷಣವೇ ಕೈ ಬಿಡಬೇಕು, ಸರ್ಕಾರದಿಂದ ಆಗಿರುವ ತಪ್ಪನ್ನು ಸರಕಾರವೇ ಸರಿ ಪಡಿಸಬೇಕು. ತ್ವರಿತವಾಗಿ ಎಂಡೋ ಸಂತ್ರಸ್ತರ ಬದುಕಿಗೆ ಸೂಕ್ತ ಪರಿಹಾರ ನೀಡುವುದಲ್ಲದೆ ಅಗತ್ಯ ಪುನರ್ವಸತಿ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಈಗ್ರಹಿಸಲಾಯಿತು.
24ರಿಂದ ಸಿಎಂಗೆ ಪತ್ರ ಚಳವಳಿ: 24ರಿಂದ 28ರ ವರೆಗೆ ಮುಖ್ಯಮಂತ್ರಿಗೆ ಪತ್ರ ಬರೆದು ಗಮನ ಸೆಳೆಯುವ ಚಳವಳಿ ಹಮ್ಮಿಕೊಳ್ಳಲಾಗುವುದು, ಅದಕ್ಕೂ ಸರ್ಕಾರದಿಂದ ಸ್ಪಂದನ ದೊರೆಯದಿದ್ದರೆ ಫೆ. 5ರಿಂದ 10 ರ ಒಳಗಾಗಿ ಪುತ್ತೂರು ಸಹಾಯಕ ಕಮಿಷನರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ಇಲ್ಲಿಯೂ ಫಲಿತಾಂಶ ದೊರೆಯದಿದ್ದರೆ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಚಳವಳಿ ನಡೆಸಲು ಬೆಂಗಳೂರು ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದೆಂದು ನಿರ್ಣಯಿಸಲಾಯಿತು.
ಆತ್ಮಹತ್ಯೆಯೇ ಗತಿ: ಈ ಬಗ್ಗೆ ವಿವರಣೆ ನೀಡಿದ ಶ್ರೀಧರ ಗೌಡ, ಎಂಡೋ ಸಂತ್ರಸ್ತರೆಲ್ಲರ ಬದುಕಿಗೆ ನ್ಯಾಯ ದೊರಕಿಸದಿದ್ದರೆ ಎಂಡೋ ಪೀಡಿತರು ಆತ್ಮಹತ್ಯೆಗೆ ಮುಂದಾಗುವ ಅನಿವಾರ್ಯತೆಯನ್ನು ಸರ್ಕಾರವೇ ಸೃಷ್ಟಿಸಿದಂತಾಗುವುದು ಎಂದು ಎಚ್ಚರಿಸಿದ್ದಾರೆ. ಸ್ಥಳೀಯ ಮುಂದಾಳುಗಳಾದ ಪೂವಾಜೆ ಕುಶಾಲಪ್ಪ ಗೌಡ, ಕೃಷ್ಣ ಭಟ್, ನಾರಾಯಣ ಗೌಡ, ಅವಿನಾಶ್, ಅಲ್ಬರ್ಟ್ ಮಿನೇಜಸ್ ಇದ್ದರು.
ಟ್ರಾಫಿಕ್ ಜಾಮ್ ಕಿರಿಕಿರಿ
ಮಂಗಳೂರು: ನಗರದಲ್ಲಿ ಗುರುವಾರ ಬೆಳಗ್ಗೆ ಕಚೇರಿ ತೆರಳುವ ವೇಳೆ ಟ್ರಾಫಿಕ್ ಜಾಮ್ ಉಂಟಾಗಿದೆ. ಸತತ ಎರಡು ದಿನಗಳ ರಜೆ ಬಳಿಕ ಗುರುವಾರ ಬೆಳಗ್ಗೆ ಈ ಸಂಚಾರ ನಿಬಿಡತೆ ಎಲ್ಲೆಡೆ ಕಾಣಿಸಿಕೊಂಡಿದೆ. ಪಂಪ್‌ವೆಲ್, ಪಡೀಲ್, ನಂತೂರ್, ಕಂಕನಾಡಿ, ಎಕ್ಕೂರ್ ಪ್ರದೇಶದಲ್ಲಿ ಸತತ ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿದೆ. ಸಂಚಾರಿ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ವಾಹನಗಳ ನಿಬಿಡತೆಯಿಂದಾಗಿ ಸಂಚಾರಕ್ಕೆ ಸಮಸ್ಯೆ ಆಗಿದೆ.