ಬೆಳೆ ಸಾಲ ಮನ್ನ ಹಣ ಬಿಡುಗಡೆ
ಪುತ್ತೂರು: ರೈತರ ಬೆಳೆ ಸಾಲ 25 ಸಾವಿರವರೆಗಿನ ಮನ್ನಾಕ್ಕಾಗಿ ಪುತ್ತೂರು ತಾಲೂಕಿಗೆ ಒಟ್ಟು 30,06,03,646 ಮೊತ್ತವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ. ಈ ಅನುದಾನದಲ್ಲಿ ರೈತರು ಪಡೆದುಕೊಂಡಿರುವ 25 ಸಾವಿರ ಬೆಳೆಸಾಲ ಮನ್ನಾವಾಗಲಿದ್ದು ರೈತರು ಸ್ಥಳೀಯ ಸಿ.ಎ. ಬ್ಯಾಂಕ್ಗಳಲ್ಲಿ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ಸಾಲ ಮನ್ನಾವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕಿ ತಿಳಿಸಿದ್ದಾರೆ.
ಪಾದಯಾತ್ರೆ ಮೂರನೇ ದಿನಕ್ಕೆ
ಬಂಟ್ವಾಳ: ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ಗ್ರಾಮದೆಡೆಗೆ ಬಿಜೆಪಿ ನಡಿಗೆಯ ಮೂರನೇ ದಿನದ ಪಾದಾಯಾತ್ರೆಗೆ ಗುರುವಾರ ಬೆಳಗ್ಗೆ ಕರೋಪಾಡಿ ಗ್ರಾಮದ ವಿಘ್ನೇಶ್ವರ ಭಟ್ ಅವರ ಮನೆಯಿಂದ ಚಾಲನೆ ನೀಡಲಾಯಿತು. ವಂದೆ ಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಾಯಾತ್ರೆ ಕನ್ಯಾನ, ಕರೋಪಾಡಿ ಗ್ರಾಮಗಳಲ್ಲಿ ಸಂಚರಿಸಿತು. ಕಾರ್ಯಕ್ರಮದ ರೂವಾರಿ ರಾಜೇಶ್ ನಾಯಕ್ ಉಳೇಪಾಡಿಗುತ್ತು, ಪಕ್ಷದ ಪ್ರಮುಖರಾದ ಜಿ. ಆನಂದ, ಸುಲೋಚನಾ ಜಿ.ಕೆ. ಭಟ್, ಶೈಲಜಾ ಭಟ್, ದೇವದಾಸ್ ಶೆಟ್ಟಿ, ರಾಮದಾಸ್ ಬಂಟ್ವಾಳ, ಪರುಷ ಸಾಲ್ಯಾನ್ ರತ್ತರಕೆರೆ, ಚರಣ್, ಪೃಥ್ವಿರಾಜ್, ವೇದಾವತಿ, ಲಿಂಗಪ್ಪಗೌಡ, ಮುರಳಿಕೃಷ್ಣ ಹಾಗೂ ಕನ್ಯಾನ ಗ್ರಾಪಂ ಅಧ್ಯಕ್ಷ ರಘುರಾಮ ಶೆಟ್ಟಿ ಹಾಜರಿದ್ದರು.