ಶ್ರೀಲಂಕಾ ವಲಸಿಗರಿಗೆ ಪ. ಜಾತಿ ದೃಢಪತ್ರ: ದಲಿತ ಸಂಘಟನೆ ಖಂಡನೆ
ಮಂಗಳೂರು: ಸುಳ್ಯ ಮತ್ತು ಪುತ್ತೂರಿನಲ್ಲಿ ವಾಸವಿರುವ ಶ್ರೀಲಂಕಾ ವಲಸಿಗರಿಗೆ ಪರಿಶಿಷ್ಟ ಜಾತಿ ದೃಢಪತ್ರವನ್ನು ರಾಜ್ಯ ಸರ್ಕಾರವು ನೀಡಲಿಚ್ಛಿಸಿರುವ ಕ್ರಮವನ್ನು ದ.ಕ. ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಖಂಡಿಸಿದೆ.
1972ರಲ್ಲಿ ಸುಳ್ಯ ಮತ್ತು ಪುತ್ತೂರಿನಲ್ಲಿ ಜೀವನೋಪಾಯಕ್ಕಾಗಿ ಬಂದು ನೆಲೆ ನಿಂತಿರುವ ಶ್ರೀಲಂಕಾ ವಲಸಿಗರಿಗೆ ಜಾತಿ ದೃಢಪತ್ರ ನೀಡುವುದು ಸಂವಿಧಾನ ವಿರೋಧಿ ನೀತಿಯಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ವಿಷಯದಲ್ಲಿ ಯಾವುದೇ ಬದಲಾವಣೆ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅಧಿಕಾರವಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಎಂದು ದಲಿತ ಮುಖಂಡ ಭಾಸ್ಕರ್ ಸಿ.ಎಚ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುಮಾರು 25 ಸಾವಿರ ಶ್ರೀಲಂಕಾ ನಿರಾಶ್ರಿತರು ಹಾಗೂ 35 ಸಾವಿರ ಬಾಂಗ್ಲಾದೇಶಿಯರಿಗೆ ಪರಿಶಿಷ್ಟ ಜಾತಿ ದೃಢಪತ್ರ ನೀಡಲು ಸರ್ಕಾರ ತೀರ್ಮಾನಿಸಿದ್ದಲ್ಲಿ ಮುಂದೆ ಬೈಲುಕುಪ್ಪೆ, ಉ.ಕನ್ನಡ ಜಿಲ್ಲೆಯ ಮುಂಡಗೋಡುವಿನಲ್ಲಿ ವಾಸಿಸುತ್ತಿರುವ ಟಿಬೆಟಿಯನ್ ನಿರಾಶ್ರಿತರು, ಸಿದ್ಧಿ ಜನಾಂಗ ಇವರೂ ಜಾತಿ ಪ್ರಮಾಣ ಪತ್ರ ಕೇಳುವುದರಲ್ಲಿ ಸಂಶಯವಿಲ್ಲ ಎಂದರು.
ಈಗಾಗಲೇ ರಾಜ್ಯ ಸರ್ಕಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸುಳ್ಯ ಮತ್ತು ರಾಯಚೂರಿನಲ್ಲಿ ನೆಲೆಸಿರುವ ವಲಸಿಗರಿಗೆ ಪರಿಶಿಷ್ಟ ಜಾತಿ ದೃಢಪತ್ರ ನೀಡಲು ಚಿಂತನೆ ನಡೆಸಿರುವುದು ವಿಷಾದನೀಯ. ಇಂಥ ನಿರ್ಧಾರ ಕೈಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ತೀವ್ರತರ ಹೋರಾಟ ನಡೆಸಲಾಗುವುದು ಎಂದು ಒಕ್ಕೂಟ ಸಂಚಾಲಕ ಅಶೋಕ್ ಕೊಂಚಾಡಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಸಹ ಸಂಚಾಲಕ ಎಸ್.ಪಿ. ಆನಂದ್, ಕೋಶಾಧಿಕಾರಿ ಮಲ್ಲಿಕಾರ್ಜುನ್ ಕೋಡಿಕಲ್, ನಿವೃತ್ತ ಬ್ಯಾಂಕ್ ಅಧಿಕಾರಿ ನಿರ್ಮಲ್ ಕುಮಾರ್ ಇದ್ದರು.