ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಬ್ರಹ್ಮಣ್ಯ: ದೇಗುಲ-ಭದ್ರತಾ ಸಿಬ್ಬಂದಿ ಥಳಿತ; ಭಕ್ತರಿಂದ ದೂರು

Rashmi Kasaragodu
Updated On : 17 Jan 2014, 1:05 am

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ ಶನಿವಾರದಿಂದ ದೇವರ ದರ್ಶನಕ್ಕೆ ಭಾರಿ ಸಂದಣಿ ಇದ್ದು,  ಈ ವೇಳೆ ಭದ್ರತಾ ಸಿಬ್ಬಂದಿ ಭಕ್ತರಿಗೆ ಥಳಿಸಿದ ಎರಡು ಪ್ರತ್ಯೇಕ ಘಟನೆಗಳು ನಡೆದು ಆ ಕುರಿತು ದೇವಳದ ಕಾರ್ಯನಿರ್ವಹಣಾಕಾರಿಗಳಿಗೆ ಭಕ್ತರು ದೂರು ನೀಡಿದ್ದಾರೆ.
ಕಳೆದ ಶನಿವಾರ ರಾತ್ರಿ 7.45ರ ವೇಳೆಗೆ  ದೇವಳದ ಗರ್ಭಗುಡಿಯ ಎದುರು ದೇವರ ದರ್ಶನ ಮಾಡುತ್ತಿದ್ದ ವೇಳೆ ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭ ಅಲ್ಲಿದ್ದ ಭದ್ರತಾ ಸಿಬ್ಬಂದಿ ಬೆಂಗಳೂರಿನ ನವೀನ್ ಕುಮಾರ್ ಎಂಬವರ ರಟ್ಟೆಯನ್ನು ಬಿಗಿಯಾಗಿ ಹಿಡಿದು ಕೈಯ ಉಗುರುಗಳಿಂದ ಗಾಯಗೊಳಿಸಿ, ಬೈಯ್ದಿದ್ದಾಗಿ ದೂರಲಾಗಿದ್ದು, ಇದರಿಂದ ನೊಂದ ನವೀನ್ ಕುಮಾರ್ ದೇವಳದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ವರ್ತನೆ ಕುರಿತು ದೇವಳದ ಕಾರ್ಯನಿರ್ವಹಣಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ.
ಸೋಮವಾರ ಬೆಳಗ್ಗೆ 10 ಗಂಟೆಯ ವೇಳೆ ದೇವಳದ ಹೊರಾಂಗಣದಲ್ಲಿ ಹೊಸಗಳಿಗಮ್ಮ ಗುಡಿಯ ಬಳಿ ಸರದಿ ಸಾಲಿನಲ್ಲಿದ್ದ ಭಕ್ತನೊಬ್ಬನಿಗೆ ಸೆಕ್ಯುರಿಟಿ ಗಾರ್ಡ್ ಗದರಿಸಿದಾಗ ಆ ಯುವಕ ಹಾಗೂ ಸೆಕ್ಯುರಿಟಿ ಗಾರ್ಡ್‌ನಡುವೆ ಹೊಯ್‌ಕೈ ನಡೆದಾಗ ಏಳೆಂಟು ಮಂದಿ ಭದ್ರತಾ ಸಿಬ್ಬಂದಿ ಧಾವಿಸಿ ಬಂದು ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದರು.
ಕೊನೆಗೆ ಯುವಕನ ತಾಯಿ ಬಿಡಿಸಲು ಬಂದಾಗ ಆಕೆಯ ಮೇಲೂ ಹೊಡೆಯಲು ಸಿಬ್ಬಂದಿ ಸನ್ನದ್ಧರಾದಾಗ ಸ್ಥಳದಲ್ಲಿದ್ದ ಭಕ್ತರು ಗುಂಪು ಜೋರಾಗಿ ಗದರಿಸಿದಾಗ ಸಿಬ್ಬಂದಿ ತೆರಳಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಭಕ್ತರಿಗೆ ಅಗತ್ಯ ಮಾಹಿತಿ ನೀಡಿ, ಅವರೊಂದಿಗೆ ಸೌಜನ್ಯದಿಂದ ವರ್ತಿಸುವುದು ದೇವಳದ ನೌಕರರ ಹಾಗೂ ಸೆಕ್ಯುರಿಟಿ ಗಾರ್ಡ್‌ಗಳ ಕರ್ತವ್ಯ. ಘಟನೆ ಕುರಿತಾಗಿ ಲಿಖಿತ ದೂರು ಬಂದಿದ್ದು ಸಂಬಂಧಿತ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಎಂ.ನಾಗರಾಜ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement