ಎಲ್ಲ ಹೊಸದಾಗಿ ಜೋಡಿಸಬೇಕು...
ಉಡುಪಿ: ಇಂದಿನಿಂದ ಕೃಷ್ಣಮಠದಲ್ಲಿ ಎಲ್ಲವೂ ಹೊಸತು, ಕೃಷ್ಣನನ್ನು ಬಿಟ್ಟು. ಕೃಷ್ಣನ ಪೂಜೆ ಮಾಡುವವರು, ಮಠದ ಆಡಳಿತ ನಡೆಸುವವರು, ಮಠದ ಅಧಿಕಾರಿ-ಸಿಬ್ಬಂದಿ ವರ್ಗದವರು, ಎಲ್ಲರೂ ಹೊಸಬರು.
ಶನಿವಾರ ಕಾಣಿಯೂರು ಮಠಾಧೀಶರ ಪರ್ಯಾಯ ಆರಂಭವಾಗಿದೆ, ಅದರೊಂದಿಗೆ ಹೊಸ ಪರ್ವ ಆರಂಭವಾಗಿದೆ.
ಸಂಪ್ರದಾಯದಂತೆ ಹಿಂದಿನ 2 ವರ್ಷಗಳ ಕಾಲ ಕೃಷ್ಣಮಠದಲ್ಲಿ ಪರ್ಯಾಯ ನಡೆಸಿದ ಮಠದವರು ತಾವು ಹೊಸದಾಗಿ ತಂದಿರುವ ಪಾತ್ರೆ, ಪೀಠೋಪಕರಣ, ಪೂಜಾ ಸಾಮಾಗ್ರಿ ಇತ್ಯಾದಿಗಳನ್ನೆಲ್ಲಾ ಮರಳಿ ತೆಗೆದುಕೊಂಡು ಹೋಗುತ್ತಾರೆ. ಆದ್ದರಿಂದ ಹೊಸದಾಗಿ ಪರ್ಯಾಯ ಆರಂಭಿಸಿದವರು ಮತ್ತೆ ಎಲ್ಲವನ್ನೂ ಹೊಸದಾಗಿ ಜೋಡಿಸಿಕೊಳ್ಳುವುದು, ಹೊಸ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸುವು ಸಂಪ್ರದಾಯ.
ನಿತ್ಯ ಭೇಟಿ ನೀಡುವ ಸಾವಿರಾರು ಮಂದಿ ಪ್ರವಾಸಿಗರಿಗೆ ಅನ್ನದಾನಕ್ಕೆ ಬೇಕಾದ ಭಾರಿ ಗಾತ್ರ ಹಂಡೆ, ಪಾತ್ರೆಗಳನ್ನು ಕೂಡ ಹೊಸದೇ ಆಗಬೇಕು. ಅಡುಗೆ ಮಾಡುವವರು, ಬಡಿಸುವವರು ಕೂಡ ಹೊಸಬರೇ ಆಗಿರುತ್ತಾರೆ.
ದರ್ಬಾರಿನಲ್ಲಿ ನೇಮಕ: ಪರ್ಯಾಯೋತ್ಸವದ ಮುಂಜಾನೆ ನಡೆಯುವ ದರ್ಬಾರಿನಲ್ಲಿ ನೂತನ ಪರ್ಯಾಯ ಪೀಠಾಧೀಶರು ಕೃಷ್ಣಮಠದ ಆಡಳಿತ ನೋಡಿಕೊಳ್ಳುವುದಕ್ಕೆ ದಿವಾಣರೊಬ್ಬರು, ವ್ಯವಸ್ಥಾಪಕರನ್ನು, ಹಣಕಾಸು-ಲೆಕ್ಕಪತ್ರಗಳನ್ನು ನೋಡಿಕೊಳ್ಳುವವರನ್ನು ಹೊಸದಾಗಿ ನೇಮಿಸುತ್ತಾರೆ. ಜೊತೆಗೆ ಆಸ್ಥಾನ ಪುರೋಹಿತ, ವಿದ್ವಾಂಸ, ಕಲಾವಿದರನ್ನೂ ಕೂಡ ಹೊಸದಾಗಿ ಘೋಷಿಸುತ್ತಾರೆ.
ಒಟ್ಟಿನಲ್ಲಿ ಉಡುಪಿಯ ಕೃಷ್ಣಮಠದಲ್ಲಿ ಮುಂದಿನ 2 ವರ್ಷಗಳ ಕಾಲಕ್ಕೆ ಕಾಣಿಯೂರು ಮಠದ ಹೊಸ ಪರ್ವ ಆರಂಭವಾಗಿದೆ.