ಪರ್ಯಾಯ ಪೀಠವೇರಿದ ಕಾಣಿಯೂರು ಶ್ರೀ
ಉಡುಪಿ: ಇಂದು ಮುಂಜಾನೆ ಮೂಡುದಿಕ್ಕಿನಲ್ಲಿ ಸೂರ್ಯ ಮೂಡುವುದಕ್ಕೆ ಸ್ವಲ್ಪ ಮೊದಲು, ಹಕ್ಕಿಗಳ ಗಾನ, ವೈದಿಕರ ಮಂತ್ರಘೋಷ, ಭಕ್ತಾಭಿಮಾನಿಗಳ ಹರ್ಷೋದ್ಘಾರಗಳ ನಡುವೆ, ಕೃಷ್ಣನ ಮುಂಭಾಗದಲ್ಲಿ ಶ್ರೀಮದ್ವಾಚಾರ್ಯ ಕರಾರ್ಚಿತ ಅಕ್ಷಯ ಪಾತ್ರೆಯನ್ನು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು ಕಾಣಿಯೂರು ಮಠದ ಶ್ರೀ ವಿಶ್ವವಲ್ಲಭ ತೀರ್ಥರಿಗೆ ಹಸ್ತಾಂತರಿಸಿದರು. ನಂತರ ಕಾಣಿಯೂರು ಶ್ರೀಗಳ ಕೈ ಹಿಡಿದು ಮಧ್ವಾಚಾರ್ಯರು ಸನ್ನಿಹಿತರಾಗಿರುವ ಸರ್ವಜ್ಞ ಪರ್ಯಾಯ ಪೀಠದಲ್ಲಿ ಕುಳ್ಳಿರಿಸಿದರು.
ಅಲ್ಲಿಗೆ ಕೃಷ್ಣ ಮಠದಲ್ಲಿ ಕಾಣಿಯೂರು ಮಠದ ಪರ್ಯಾಯ ಶನಿವಾರ ಮುಂಜಾನೆ ವಿದ್ಯುಕ್ತವಾಗಿ ಆರಂಭವಾಯಿತು. ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥರು ಪರ್ಯಾಯ ಶ್ರೀಗಳಾಗಿ ಕೃಷ್ಣನ ಪೂಜೆಯ ಅಧಿಕಾರ ಪಡೆದುಕೊಂಡರು.
ಇದಕ್ಕೆ ಮೊದಲು ನಸುಕಿನ ಜಾವ ಕಾಣಿಯೂರು ಶ್ರೀಗಳು ಉಡುಪಿಯಿಂದ ದಕ್ಷಿಣ ದಿಕ್ಕಿನಲ್ಲಿ 9 ಕಿ.ಮೀ. ದೂರದ ದಂಡತೀರ್ಥ ಎಂಬಲ್ಲಿಗೆ ತೆರಳಿ ಪವಿತ್ರ ಸ್ನಾನ ಮಾಡಿ, ನಸುಕಿನ 2.30ಕ್ಕೆ ಉಡುಪಿಯ ಹೆಬ್ಬಾಗಿಲು ಜೋಡುಕಟ್ಟೆಗೆ ಬಂದರು. ಅವರನ್ನು ಇತರ ಮಠಾಧೀಶರು ಸ್ವಾಗತಿಸಿದರು. ಅಲ್ಲಿ ಕಾಣಿಯೂರು ಮಠದ ಶ್ರೀನೃಸಿಂಹ ದೇವರಿಗೆ ವಿಶೇಷ ಪೂಜೆ ನಡೆಯಿತು.
ನಂತರ ವಿರಾಟ್ ಶೋಭಾಯಾತ್ರೆ ಆರಂಭಗೊಂಡಿತು. ಮೊದಲು ಪಲ್ಲಕ್ಕಿಯಲ್ಲಿ ಪಟ್ಟದ ದೇವರು, ಅವರ ಹಿಂದೆ ಜೇಷ್ಠತೆಗನುಗುಣವಾಗಿ, ತೆರೆದ ವಾಹನದಲ್ಲಿಟ್ಟ ಪಲ್ಲಕ್ಕಿಯಲ್ಲಿ ಕುಳಿತ ಇತರ ಮಠಾಧೀಶರು, ಕೊನೆಗೆ ಕಾಣಿಯೂರು ಶ್ರೀಗಳು. ಈ ಮೆರವಣಿಗೆಯನ್ನು ಜನರು ಉಡುಪಿ ರಾಜರಸ್ತೆಯ ಇಕ್ಕೆಲಗಳಲ್ಲಿ ನಿಂತು ಎವೆಯಿಕ್ಕದೇ ಕಣ್ತುಂಬಿಕೊಂಡರು.
ಶೋಭಾಯಾತ್ರೆ ರಥಬೀದಿಯಲ್ಲಿ ಕೊನೆಗೊಂಡಿತು. ಭಾವಿ ಪರ್ಯಾಯ ಕಾಣಿಯೂರು ಶ್ರೀಗಳನ್ನು ನಿರ್ಗಮನ ಪರ್ಯಾಯ ಸೋದೆ ಶ್ರೀಗಳು ಕೃಷ್ಣ ಮಠದ ಬಾಗಿಲಿನಲ್ಲಿ ಸ್ವಾಗತಿಸಿ, ಒಳಗೆ ಕರೆದೊಯ್ದು ಕೃಷ್ಣನ ದರ್ಶನ ಮಾಡಿಸಿದರು ಮತ್ತು ವಿದ್ಯುಕ್ತವಾಗಿ ಕೃಷ್ಣನ ಪೂಜೆ - ಕೃಷ್ಣನ ಮಠದ ಆಡಳಿತದ ಅಧಿಕಾರವನ್ನು ವಹಿಸಿಕೊಟ್ಟರು.
ಇದಾಗಿ ಭವ್ಯವಾಗಿ ಸಿಂಗರಿಸಲಾಗಿದ್ದ ರಾಜಾಂಗಣದಲ್ಲಿ ಅಷ್ಟ ಮಠಾಧೀಶರ ಉಪಸ್ಥಿತಿಯಲ್ಲಿ ನೂತನ ಪರ್ಯಾಯ ಶ್ರೀಗಳ ದರ್ಬಾರು, ಮುಂದಿನ 2 ವರ್ಷಗಳಿಗೆ ಆಸ್ಥಾನದ ಅಧಿಕಾರಿ, ವಿದ್ವಾಂಸರ ಘೋಷಣೆ, ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಭಕ್ತಾಭಿಮಾನಿಗಳಿಂದ ಪರ್ಯಾಯ ಶ್ರೀಗಳಿಗೆ ಅಭಿವಂದನೆ, ಅಭಿನಂದನೆಗಳು ನಡೆಯಿತು.