ಕಟ್ಟಡದಿಂದ ಬಿದ್ದು ಬಿಜಾಪುರ ಮೂಲದ ಕಾರ್ಮಿಕ ಮೃತ
ಬ್ರಹ್ಮಾವರ: ಇಲ್ಲಿನ ವಾರಂಬಳ್ಳಿ ಗ್ರಾಮದ ಧರ್ಮಾವರಂ ಆಡಿಟೋರಿಯಂ ಬಳಿ ಕಾರ್ಮಿಕನೊಬ್ಬ ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಬಿಜಾಪುರದ ಬಸವನಬಾಗೇವಾಡಿ ತಾಲೂಕಿನ ಕಡಕೊಳು ಗ್ರಾಮದಿಂದ ಬಂದಿದ್ದ ವಲಸೆ ಕಾರ್ಮಿಕ ಭೀಮನ ಗೌಡ (45) ಮೃತರು. ಅವರು ಪಿಲ್ಲರ್ ಬಾಕ್ಸನ್ನು 2ನೇ ಮಹಡಿಗೆ ಮೆಟ್ಟಿಲ ಮೂಲಕ ಕೊಂಡೊಯ್ಯುವಾಗ ಆಯತಪ್ಪಿ ಸುಮಾರು 15 ಅಡಿ ಆಳಕ್ಕೆ ಬಿದ್ದರು. ಅವರ ಮೇಲೆ ಪಿಲ್ಲರ್ ಬಾಕ್ಸ್ ಬಿದ್ದು ಎದೆಗೆ ತೀವ್ರ ಗಾಯಗಳಾದವು. ತಕ್ಷಣ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಶ್ರೀಮಂತ ಬಾಳಪ್ಪ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
ಮಿತಿ ಮೀರಿದ ಮದ್ಯ ಸೇವನೆ: ಯುವಕ ಸಾವು
ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ಕೈಲ ಗ್ರಾಮದ ಕಡೆಂಬಿಕಲ್ಲು ಎಂಬಲ್ಲಿ ಗಣೇಶ್ (35) ಎಂಬ ಯುವಕನೋರ್ವ ವಿಪರೀತ ಮಧ್ಯ ಸೇವಿಸಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ರಾಮಣ್ಣ ಗೌಡ ಎಂಬವರ ಮಗನಾಗಿರುವ ಗಣೇಶ್ ಅವಿವಾಹಿತನಾಗಿದ್ದು, ಶುಕ್ರವಾರ ರಾತ್ರಿ ವಿಪರೀತ ಮದ್ಯ ಸೇವಿಸಿ ಮಲಗಿದ್ದ. ಈತ ಶನಿವಾರ ಬೆಳಗ್ಗೆ ತೀವ್ರ ಅಸ್ವಸ್ಥಗೊಂಡಿದ್ದ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಮೃತರ ಸಹೋದರ ಮೋನಪ್ಪ ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.