ಕಾರ್ಮಿಕರ ಭವಿಷ್ಯ ನಿಧಿ ಉಪಕಚೇರಿಗೆ ಆಗ್ರಹ: 21ರಂದು ಮೆರವಣಿಗೆ
ಪುತ್ತೂರು: ಪುತ್ತೂರಿನಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಉಪಕಚೇರಿಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿ 21ರಂದು ಎಐಟಿಯುಸಿ ವತಿಯಿಂದ ಮೆರವಣಿಗೆ ಮತ್ತು ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುತ್ತೂರು ಕೇಂದ್ರ ವ್ಯಾಪ್ತಿಯ ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯ ತಾಲೂಕುಗಳಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದಾರೆ. ಇವರು ಮಂಗಳೂರಿನ ಕಾರ್ಮಿಕ ನಿಧಿ ಭವಿಷ್ಯ ಸಂಘಟನೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಚಂದಾದಾರರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಿಳಾ ಬೀಡಿ ಮತ್ತು ತೋಟಗಾರಿಕಾ ಕಾರ್ಮಿಕರಾಗಿದ್ದು ಇವರು ತಮ್ಮ ಭವಿಷ್ಯ ನಿಧಿ, ಪಿಂಚಿಣಿಯ ಅವಶ್ಯಕತೆಗಳಿಗಾಗಿ ದೂರದ ಮಂಗಳೂರಿಗೆ ಹೋಗಬೇಕಾಗಿದೆ. ಹಾಗಾಗಿ 3 ತಾಲೂಕುಗಳನ್ನು ಕೇಂದ್ರವಾಗಿರಿಸಿ ಪುತ್ತೂರಿನಲ್ಲಿ ಭವಿಷ್ಯ ನಿಧಿ ಕಚೇರಿಯನ್ನು ತೆರೆಯುವಂತೆ ಸಂಘಟನೆ ಹಲವು ಬಾರಿ ಆಗ್ರಹಿಸಿದರೂ ಮಂಗಳೂರಿನ ಪ್ರಾದೇಶಿಕ ಆಯುಕ್ತರು ಈ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಎಐಟಿಯುಸಿ ನೇತೃತ್ವದಲ್ಲಿ ಭವಿಷ್ಯ ನಿಧಿ ಉಪ ಕಚೇರಿ ಸ್ಥಾಪನೆಗೆ ಆಗ್ರಹಿಸಿ 21ರಂದು ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ದ.ಕ. ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿ. ಸೀತಾರಾಂ ಬೇರಿಂಜ ತಿಳಿಸಿದ್ದಾರೆ.