ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಗೆಹರಿಯದ ಟಿಪ್ಪು ವೃತ್ತ ವಿವಾದ

Rashmi Kasaragodu
Updated On : 19 Jan 2014, 12:23 pm


ಸುಳ್ಯ: ಸುಳ್ಯದ ನಾವೂರಿನಲ್ಲಿ ಈದ್‌ಮಿಲಾದ್ ದಿನದಂದು ನಿರ್ಮಿಸಲಾದ ಟಿಪ್ಪು ಸುಲ್ತಾನ್ ಹೆಸರಿನ ವೃತ್ತದ ವಿವಾದ ಬಗೆಹರಿದಿಲ್ಲ. ಶನಿವಾರ ಈ ವೃತ್ತವನ್ನು ತೆಗೆಸುವಂತೆ ಬಿಜೆಪಿ ಪ್ರತಿಭಟನೆ ನಡೆಸಿದರೆ, ಯಥಾಸ್ಥಿತಿ ಉಳಿಸುವಂತೆ ನಾಗರಿಕ ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿತು.
ಈ ವೃತ್ತದಿಂದ ವಿವಾದ ಉಂಟಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಡಾ. ಔದ್ರಾಮ, ನಗರ ಪಂಚಾಯಿತಿ ಪ್ರತಿನಿಧಿಗಳ ಸಭೆ ಕರೆದಿದ್ದರು. ನ.ಪಂ. ಆಡಳಿತಾಧಿಕಾರಿಯೂ ಆಗಿರುವ ಅವರು ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಈ ಮಧ್ಯೆ ನ.ಪಂ. ಸದಸ್ಯರೊಬ್ಬರು ವಿವಾದವನ್ನು ಸೌಹಾರ್ದಯುತವಾಗಿ ಮುಗಿಸುವ ಯತ್ನ ನಡೆಸಿದ್ದರಾದರೂ ಅದು ಫಲಕಾರಿಯಾಗಿಲ್ಲ. ಶನಿವಾರ ಅಪರಾಹ್ನ ವೃತ್ತ ತೆರವುಗೊಳಿಸುವುದಾಗಿ ಮುಖ್ಯಾಧಿಕಾರಿ ಬಿಜೆಪಿ ನಿಯೋಗಕ್ಕೆ ಭರವಸೆ ನೀಡಿದ್ದರು. ಈ ಕುರಿತು ಅವರು ಪೊಲೀಸ್ ರಕ್ಷಣೆಯನ್ನೂ ಕೇಳಿದ್ದರು. ಆದರೆ, ಇದೊಂದು ಸೂಕ್ಷ್ಮ ವಿಷಯ ಆಗಿರುವುದರಿಂದ ತಹಸೀಲ್ದಾರ್ ಸ್ಥಳದಲ್ಲಿ ಇದ್ದೇ ತೆರವು ಕಾರ್ಯಾಚರಣೆ ನಡೆಯಬೇಕು ಎಂದು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ಟಿಪ್ಪು ವೃತ್ತದ ಪರವಾಗಿ ನಡೆದ ಪ್ರತಿಭಟನೆಯ ಮಾಹಿತಿಯನ್ನೂ ತಹಸೀಲ್ದಾರ್‌ಗೆ ಮುಖ್ಯಾಧಿಕಾರಿ ತಿಳಿಸಿದ್ದಾರೆ. ಶನಿವಾರ ತಹಸೀಲ್ದಾರ್ ರಜೆಯಲ್ಲಿದ್ದುದರಿಂದ ಅವರು ಬಂದ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ.
ತೆರವಿಗೆ 48 ಗಂಟೆ ಗಡುವು: ಅನಧಿಕೃತವಾಗಿ ನಿರ್ಮಿಸಲಾದ ಟಿಪ್ಪು ವೃತ್ತವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಸುಳ್ಯ ನಗರ ಪಂಚಾಯಿತಿ ಎದುರು ಪ್ರತಿಭಟನೆ ನಡೆಯಿತು. ಬಿಜೆಪಿ ನಾಯಕರಾದ ಪಿ.ಕೆ. ಉಮೇಶ್ ಮತ್ತು ನವೀನ್ ಕುಮಾರ್ ಮೇನಾಲ ಮಾತನಾಡಿ, ಮುಂದಿನ 48 ಗಂಟೆ ಒಳಗಾಗಿ ಈ ಅನಧಿಕೃತ ವೃತ್ತವನ್ನು ತೆರವುಗೊಳಿಸದಿದ್ದರೆ ನಾಗರಿಕರ ಸಹಾಯದಿಂದ ನಾವೇ ಅದನ್ನು ತೆರವುಗೊಳಿಸುತ್ತೇವೆ. ಮುಂದಿನ ಅನಾಹುತಗಳಿಗೆ ಅಧಿಕಾರಿಗಳೇ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.
ಈ ಸಂದರ್ಭ ಮುಖ್ಯಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ 'ನಮ್ಮಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದರಿಂದ ತೆರವುಗೊಳಿಸಲು ತಡವಾಯಿತು. ಕೂಡಲೆ ತೆರವುಗೊಳಿಸಲಾಗುವುದು' ಎಂದು ಭರವಸೆ ನೀಡಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಆರ್‌ಎಸ್‌ಎಸ್ ಮುಖಂಡರಾದ ನ. ಸೀತಾರಾಮ, ಡಾ. ಮನೋಜ್, ಬಿಜೆಪಿ ನಾಯಕರಾದ ಪ್ರಕಾಶ್ ಹೆಗ್ಡೆ, ಐ.ಬಿ. ಚಂದ್ರಶೇಖರ, ಹರೀಶ್ ಉಬರಡ್ಕ, ಗಿರೀಶ್ ಕಲ್ಲುಗದ್ದೆ, ಸೋಮನಾಥ ಪೂಜಾರಿ, ಕರುಣಾಕರ ಅಡ್ಪಂಗಾಯ, ವಿ. ಸಂಜಯಕುಮಾರ್, ಹರೀಶ್ ಬೊಡುಪನ್ನೆ, ಅಜಿತ್ ಪೇರಾಲು, ದಾಮೋದರ ಮಂಚಿ, ಅಶೋಕ್ ಅಡ್ಕಾರ್ ಇದ್ದರು.
ವೃತ್ತವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗುವಂತೆ ನಗರ ಪಂಚಾಯಿತಿನಲ್ಲಿ ಮುಖ್ಯಾಧಿಕಾರಿಗೆ ಎಸ್‌ಡಿಪಿಐ, ಕಾಂಗ್ರೆಸ್ ಹಾಗೂ ಇನ್ನಿತರ ಮುಖಂಡರನ್ನೊಳಗೊಂಡ ನಾಗರಿಕ ಹಿತರಕ್ಷಣಾ ಸಮಿತಿಯು ಮನವಿ ಸಲ್ಲಿಸಿತು. ಬಳಿಕ ಮಾತನಾಡಿದ ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ಕಲಾಂ, ಕಳೆದ ಬಾರಿ ಈ ವೃತ್ತ ನಿರ್ಮಿಸಿದಾಗ ಇದನ್ನು ಅನಧಿಕೃತವೆಂದು ತೆಗೆಸಿದರು. ಆದರೆ, ಆ ಸಂದರ್ಭ ನಮ್ಮ ಬೇಡಿಕೆಯಂತೆ ಎಲ್ಲ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಅದು ಈಡೇರಿಲ್ಲ ಎಂದರು. ನ.ಪಂ. ಸದಸ್ಯ ಕೆ.ಎಸ್. ಉಮ್ಮರ್, ಸತ್ತಾರ್ ಸಂಗಂ, ಶರೀಫ್ ಕಂಠಿ, ರಶೀದ್ ಜಟ್ಟಿಪಳ್ಳ, ಮಹಮ್ಮದ್ ಸವಾದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement