ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹೊಂಡಮಯ ಬಾಳಿಲ- ಬೆಳ್ಳಾರೆ ರಸ್ತೆ ದುರಸ್ತಿಗಾಗಿ 3 ಗಂಟೆ ರಸ್ತೆ ತಡೆ

Rashmi Kasaragodu
Updated On : 19 Jan 2014, 12:24 pm

ಸುಳ್ಯ: ಬಾಳಿಲ- ಬೆಳ್ಳಾರೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸರಿಪಡಿಸಲು ಆಗ್ರಹಿಸಿ ಎರಡನೇ ಬಾರಿಗೆ ಸಾರ್ವಜನಿಕರು ಶನಿವಾರ ರಸ್ತೆತಡೆ ಪ್ರತಿಭಟನೆ ನಡೆಸಿದರು.
ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಆರಂಭಿಸಲಾಗಿದ್ದು, ಮಧ್ಯಾಹ್ನ 1.15ರ ವೇಳೆಗೆ ಮಂಗಳೂರಿನ ಇಲಾಖೆ ಎಂಜಿನಿಯರ್ ಸ್ಥಳಕ್ಕಾಗಮಿಸಿ ಫೆಬ್ರವರಿ ತಿಂಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೊನೆಗೊಳಿಸಲಾಯಿತು. ರಸ್ತೆ ತಡೆಯಿಂದಾಗಿ ರಸ್ತೆಯ ಇಕ್ಕೆಲೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆಸ್ಪತ್ರೆಗೆ ಹೋಗುವವರಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪಿಡಬ್ಲ್ಯುಡಿ ಎಂಜಿನಿಯರ್ ಪೀಟರ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, 'ಈ ಮೊದಲು ಪ್ರತಿಭಟನೆ ನಡೆಸಿದಾಗ ಜ.15ರೊಳಗೆ ರಸ್ತೆ ಕಾಮಗಾರಿ ನಡೆಸುವುದಾಗಿ ಸುಳ್ಳು ಭರವಸೆ ನೀಡಿದ್ದೀರಿ. ಮಂಗಳೂರಿಂದ ಇಲಾಖೆಯ ಎಂಜಿನಿಯರ್ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲವೆ' ಎಂದು ಪಟ್ಟುಹಿಡಿದರು.
'ರಸ್ತೆತಡೆಯಿಂದಾಗಿ ವಾಹನ ಸಂಚಾರಕ್ಕೆ ತಡೆಯಾಗುತ್ತಿದೆ. ರಸ್ತೆತಡೆ ತೆರವುಗೊಳಿಸಿ ಪ್ರತಿಭಟನೆ ನಡೆಸಿ, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ವೃತ್ತ ನಿರೀಕ್ಷಕ ಸತೀಶ್ ಹೇಳಿದಾಗ, ಸಿಟ್ಟಿಗೆದ್ದ ಪ್ರತಿಭಟನಾಕಾರರು, 'ನಾವು ಪ್ರತಿಭಟನೆ ಮಾಡುತ್ತಿರುವುದು ಸಾರ್ವಜನಿಕರು ಸಂಚರಿಸುವ ರಸ್ತೆ ದುರಸ್ತಿಗಾಗಿಯೇ ಹೊರತು ನಮ್ಮ ಮನೆಗೆ ಹೋಗುವ ರಸ್ತೆಗಾಗಿ ಅಲ್ಲ. ಜೈಲಿಗೆ ಹೋಗಲೂ ಸಿದ್ಧ' ಎಂದು ಹೇಳಿ ಸ್ಥಳದಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದರು.
ಸಾಥ್ ನೀಡಿದ ಮುತ್ತಪ್ಪ ರೈ: ಇದೇ ವೇಳೆ ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಹೋಗುತ್ತಿದ್ದ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮುತ್ತಪ್ಪ ರೈ ಸ್ಥಳಕ್ಕೆ ಬಂದು ಪ್ರತಿಭಟನೆಗೆ ಜಯ ಕರ್ನಾಟಕದ ಸಂಪೂರ್ಣ ಬೆಂಬಲವಿದೆ ಎಂದು ಹೇ ಳಿದರು.
ಇದೇ ವೇಳೆ ಸ್ಥಳಕ್ಕೆ ಮಂಗಳೂರಿನಿಂದ ಎಂಜಿನಿಯರ್ ಹನೀಫ್ ಆಗಮಿಸಿದ್ದು, ಜ.25ರಂದು ಟೆಂಡರ್ ಕರೆದು ಫೆಬ್ರವರಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ದಾಖಲೆ ಸಮೇತ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.
ಉಮೇಶ್ ಮರುವಂಜ, ಇಸಾಕ್ ಸಾಹೇಬ್ ಪಾಜಪಳ್ಳ, ಹನೀಫ್ ಸಾಹೇಬ್, ಸುಧಾಕರ ರೈ, ರಮೇಶ್ ಕೋಟೆ, ಗೋವಿಂದ ಭಟ್, ವೆಂಕಟಕೃಷ್ಣ ಶರ್ಮ, ಹರ್ಷನ್, ಎ.ವಿ. ಭಟ್, ಹರೀಶ್ ಕೊಡಿಯಾಲ ಹಾಗೂ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement