ಈದ್‌ಮಿಲಾದ್: ಧಾರ್ಮಿಕ ಮೆರವಣಿಗೆ
ಕುಶಾಲನಗರ: ಕುಶಾಲನಗರ ಮುಸ್ಲಿಂ ಸಮುದಾಯ ಬಾಂಧವರು ಈದ್ ಮಿಲಾದ್ ಅಂಗವಾಗಿ ಭಾನುವಾರ ಧಾರ್ಮಿಕ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು.
ದಾರುಲ್ ಉಲೂಂ ಮದರಸಾದ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನ ಬಂಧುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಇಂದಿರಾ ಬಡಾವಣೆಯಲ್ಲಿನ ಮದರಸಾದಿಂದ ತೆರಳಿದ ಮೆರವಣಿಗೆ ಪಟ್ಟಣದ ಮುಖ್ಯರಸ್ತೆಗಾಗಿ ಸಾಗಿ ದಂಡಿನಪೇಟೆಯ ಮೂಲಕ ಸಾಗಿ ಬಂತು. ಮೆರವಣಿಗೆಯುದ್ದಕ್ಕೂ ಪ್ರವಾದಿ ಪೈಗಂಬರರ ಕುರಿತಾದ ಭಕ್ತಿಯ ಘೋಷಣೆಗಳನ್ನು ಕೂಗಿದರು.
ಮೆರವಣಿಗೆಯಲ್ಲಿ ಹಲವರು ತಮ್ಮ ವಾಹನಗಳಲ್ಲಿ ಮೆಕ್ಕಾ ಮದೀನದಲ್ಲಿನ ದೇವಾಲಯಗಳ ಚಿತ್ರಗಳನ್ನು ರಚಿಸಿದ್ದ ಬಗೆ ನೋಡುಗರ ಗಮನ ಸೆಳೆಯಿತು.
ಮೆರವಣಿಗೆಯ ಸಂದರ್ಭ ಮದರಸಾದ ಧರ್ಮಗುರುಗಳಾದ ತಮ್ಲಿಕ್ ಧಾರಿಮಿ ಸಂದೇಶ ನೀಡಿ, ವಿಶ್ವದಲ್ಲಿ ಶಾಂತಿಯ ಬೆಳಕನ್ನು ಬೆಳಗಿಸಿದ ಪೈಗಂಬರರ ಆದರ್ಶಗಳನ್ನು ಈ ಭೂಮಿಯ ಮೇಲಿನ ಸರ್ವರು ಅನುಸರಿಸಬೇಕು. ಈ ಮೂಲಕ ಜಗತ್ತಿನಲ್ಲಿ ಅಶಾಂತಿ, ಅತೃಪ್ತಿ, ದ್ವೇಷ ಮೊದಲಾದ ಅನಾಚಾರಗಳು ನಶಿಸಿ ಜಗತ್ತಿನಲ್ಲಿ ಶಾಂತಿ ನೆಲಸುವುದರೊಂದಿಗೆ ಸೌಹಾರ್ದದ ನಾಡು ನಿರ್ಮಾಣಗೊಳ್ಳಲಿದೆ ಎಂದರು.
ಪ್ರತಿಯೊಬ್ಬರು ಪರಸ್ಪರ ಪ್ರೀತಿಯೊಂದಿಗೆ ಸ್ನೇಹ ಸೌಹಾರ್ದತೆ ಮೂಲಕ ಬದುಕು ಕಟ್ಟಬೇಕು ಎಂದು ಧಾರಿಮಿ ಕರೆ ನೀಡಿದರು.