ಎತ್ತಿನಹೊಳೆ, ನೇತ್ರಾವತಿ ತಿರುವು ಯೋಜನೆ ಪ್ರತ್ಯೇಕ: ಮೊಯ್ಲಿ
ಕ.ಪ್ರ.ವಾರ್ತೆ , ಮಂಗಳೂರು , ಜ. 19
ಎತ್ತಿನಹೊಳೆ ಯೋಜನೆ ಎಂದರೆ 'ನೇತ್ರಾವತಿ ನದಿ ತಿರುವು' ಅಲ್ಲ. ಅದು ಬೇರೆ, ಇದು ಬೇರೆಯೇ. ಹಾಗಾಗಿ ಎತ್ತಿನಹೊಳೆ ಯೋಜನೆ ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ನೈಸರ್ಗಿಕ ಅನಿಲ ಮತ್ತು ಪರಿಸರ ಸಚಿವ ಡಾ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಭಾನುವಾರ ಮಂಗಳೂರಲ್ಲಿ ಸುದ್ದಿಗಾರರಲ್ಲಿ ಮಾತನಾಡಿ, 'ಸರ್ಕಾರ ಈಗಾಗಲೇ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಿದೆ. ಯೋಜನೆಗೆ ಒಪ್ಪಿಗೆಯೂ ಸಿಕ್ಕಿದೆ. ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಅನುಮತಿ ಪಡೆಯಲಾಗಿದೆ. ನೇತ್ರಾವತಿ ತಿರುವು ಯೋಜನೆ ಅನುಷ್ಠಾನ ಬಗ್ಗೆ ಡಾ. ಪರಮಶಿವಯ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಕೂಡ ಪರಿಸರ ತಜ್ಞರ ಜತೆ ಸಮಾಲೋಚನೆ ನಡೆಸಿಯೇ ಎತ್ತಿನಹೊಳೆ ಯೋಜನೆ ಜಾರಿಗೆ ಮುಂದಾಗಿದ್ದರು' ಎಂದರು.
ಪುತ್ರನಿಗೆ ಲಾಬಿ ಮಾಡಲ್ಲ: ಪುತ್ರ ಹರ್ಷ ಮೊಯ್ಲಿ ದ.ಕ. ಜಿಲ್ಲೆಯಿಂದ ಸ್ಪರ್ಧೆಗೆ ಟಿಕೆಟ್ ನೀಡುವ ವಿಚಾರದಲ್ಲಿ ನಾನಿಲ್ಲ. ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ನಾನು ಯಾವುದೇ ಲಾಬಿ ನಡೆಸುವುದಿಲ್ಲ ಎಂದರು.
ಸಬ್ಸಿಡಿ ಸಿಲಿಂಡರ್ 12ಕ್ಕೇರಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ
ಮೂಡುಬಿದಿರೆ: ಮುಂದಿನ ವಾರ ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್ ಸಂಖ್ಯೆಯನ್ನು ವಾರ್ಷಿಕ 9ರಿಂದ 12ಕ್ಕೇರಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಕೇಂದ್ರ ಇಂಧನ ಸಚಿವ ವೀರಪ್ಪ ಮೊಯ್ಲಿ ಹೇಳಿದರು. ಮೂಡುಬಿದಿರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಿನ್ನಿಗಂಬಳದ ಶಾಲೆಯ ಬಳಿ ಹಾದುಹೋಗುವ ಮಂಗಳೂರು-ಬೆಂಗಳೂರು ಎಚ್ಪಿಸಿಎಲ್ ಪೈಪ್ಲೈನ್ ತಂತ್ರಜ್ಞಾನ ಉತ್ತಮವಾಗಿದ್ದು, ಜನರು ಈ ಬಗ್ಗೆ ಭಯಪಡಬೇಕಾಗಿಲ್ಲ ಎಂದು ಆಭಯ ನೀಡಿದರು.