ಸರ್ಕಾರಿ ಆಸ್ಪತ್ರೆ ಖಾಸಗಿಕರಣ ವಿರುದ್ಧ ಇಂದು ಡಿವೈಎಫ್‌ಐ ಪ್ರತಿಭಟನೆ
ಮಂಗಳೂರು: ಖಾಸಗಿ ಆಸ್ಪತ್ರೆ ನಿಯಂತ್ರಣ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಚಿಕಿತ್ಸೆ ಸಿಗುವಂತಾಗಲು 20ರಂದು ಡಿವೈಎಫ್‌ಐ ಸಾಮೂಹಿಕ ಧರಣಿ ಆಯೋಜಿಸಿದೆ. ಆಸ್ಪತ್ರೆಯಲ್ಲಿ ವೈದ್ಯರ, ಮೂಲ ಸೌಕರ್ಯಗಳ ಕೊರತೆ ಇದೆ. ಅನಾರೋಗ್ಯ ಪೀಡಿತರ ಜನರ, ಕುಟುಂಬಗಳ ಅಸಹಾಯಕತೆಯನ್ನು ಬಂಡವಾಳ ಮಾಡಿ ಖಾಸಗಿ ಆಸ್ಪತ್ರೆಗಳು ಲೂಟಿ ಮಾಡುತ್ತಿವೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ವೆನ್ಲಾಕ್ ಆಸ್ಪತ್ರೆಯಲ್ಲಿ ಬಡವರಿಗೂ, ಅಂತ್ಯೋದಯ ಕಾರ್ಡ್ ಇದ್ದವರಿಗೂ ಉಚಿತ ಚಿಕಿತ್ಸೆ ಸಿಗುತ್ತಿಲ್ಲ. ಬಡವರು, ಹಣ ನೀಡದೆ ಹೋದರೆ ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತಿದೆ. ಪ್ರತಿಯೊಬ್ಬನಿಗೂ ಆರೋಗ್ಯ ಸೇವೆ ಖಾತರಿಪಡಿಸುವುದು ಸರ್ಕಾರದ ಹೊಣೆ. ವೆನ್ಲಾಕ್ ಸಹಿತ ಜಿಲ್ಲೆ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗೆ ಬಿಟ್ಟುಕೊಡಲಾಗಿದೆ. 2007ರಲ್ಲಿ ಡಿವೈಎಫ್‌ಐ ನಡೆಸಿದ ಪ್ರತಿಭಟನೆಯನ್ನು ಲೆಕ್ಕಿಸದೆ ಸರ್ಕಾರಿ- ಖಾಸಗಿ ಸಹಭಾಗಿತ್ವ ಶುಲ್ಕ ನೀತಿ ಜಾರಿಗೊಳಿಸಲಾಗಿದೆ. ವೆನ್ಲಾಕ್‌ನಲ್ಲಿ ಖಾಸಗಿ ಸಹಭಾಗಿತ್ವ ರದ್ದುಗೊಳಿಸಿ, ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಲೂಟಿ ಮಾಡುವುದನ್ನು ನಿಲ್ಲಿಸಲಿ ಎಂದರು. ಬಿ.ಕೆ. ಇಮ್ತಿಯಾಜ್, ಸಂತೋಷ್ ಬಜಾಲ್, ಮಹಾಬಲ ದೆಪ್ಪಲಿಮಾರ್ ಇದ್ದರು.