ಸುದ್ದಿ ಸಂಕ್ಷೇಪ
ಕಾರು ಪಲ್ಟಿ: ಯುವಕ ಮೃತ್ಯು
ಸುಳ್ಯ: ಇಲ್ಲಿಗೆ ಸಮೀಪದ ಅಡ್ಕಾರು ಬಳಿ ಶನಿವಾರ ಮಧ್ಯರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಅಜ್ಜಾವರದ ಯುವಕ ಸಂಶುದ್ದೀನ್ ಎಂಬವರು ಸಾವಿಗೀಡಾಗಿದ್ದಾರೆ. ಕದಿಕಡ್ಕದಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಕಾರು ಅಡ್ಕಾರು ವಿನೋಬಾನಗರದ ಜಲ್ಲಿ ಕ್ರಶರ್ ಬಳಿ ಕಮರಿಗೆ ಉರುಳಿತು. ಕಾರಿನಲ್ಲಿದ್ದ ಸಂಶುದ್ದೀನ್, ತಾಜುದ್ದೀನ್ ಮತ್ತು ಬಶೀರ್ ಎಂಬವರು ಗಂಭೀರವಾಗಿ ಗಾಯಗೊಂಡರು. ಸುಮಾರು ಎರಡು ಗಂಟೆ ಬಳಿಕವಷ್ಟೇ ಅಪಘಾತದ ವಿಷಯ ಇತರರಿಗೆ ತಿಳಿದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆ ವೇಳಗೆ ಸಂಶುದ್ದೀನ್ ಮೃತಪಟ್ಟಿದ್ದರು. ಇತರ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಜ್ಜಾವರ ಗ್ರಾಮದ ಬಯಂಬು ಮೆಹಬೂಬ್ ಅವರ ಪುತ್ರ ಸಂಶುದ್ದೀನ್ ಚಿಕನ್ ಸೆಂಟರ್ ನಡೆಸುತ್ತಿದ್ದರು.
ಕಾರು ಡಿಕ್ಕಿ: ಸವಾರ ಸಾವು
ಮಂಗಳೂರು: ನಗರದ ಕೆಪಿಟಿ ಜಂಕ್ಷನ್ ಬಳಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಹಿತೇಶ್(32) ಸ್ಥಳದಲ್ಲೇ ಸಾವಿಗೀಡಾದ ಘಟನೆ ಭಾನುವಾರ ಸಂಭವಿಸಿದೆ. ನಂತೂರಿನಿಂದ ಕೂಳೂರಿಗೆ ಹೋಗುತ್ತಿದ್ದ ಕಾರು ಮತ್ತು ಯೆಯ್ಯಾಡಿಯಿಂದ ಬಿಜೈಗೆ ಹೋಗುತ್ತಿದ್ದ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿತ್ತು. ಅಳಪೆ ನಿವಾಸಿ ಮರ ಕೆಲಸದ ಹಿತೇಶ್ ಗಂಭೀರ ಗಾಯದಿಂದ ಸ್ಥಳದಲ್ಲೇ ಅಸುನೀಗಿದರು. ಸಂಚಾರಿ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜುಗಾರಿ: 15 ಸೆರೆ
ಮಂಗಳೂರು: ಬಲ್ಮಠದ ವಸತಿಗೃಹವೊಂದಕ್ಕೆ ದಾಳಿ ನಡೆಸಿದ ಕದ್ರಿ ಪೊಲೀಸರು ಜುಗಾರಿ ಆಟ ನಿರತ 15 ಮಂದಿಯನ್ನು ಬಂಧಿಸಿದ ಘಟನೆ ಭಾನುವಾರ ವರದಿಯಾಗಿದೆ. ಶನಿವಾರ ರಾತ್ರಿ ದಾಳಿ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆ ವೇಳೆ ಅಕ್ರಮ ಜುಗಾರಿ ಆಟಕ್ಕೆ ಬಳಸಿದ ರು. 14,390 ನಗದು ವಶಪಡಿಸಲಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಮಂಗಳೂರು: ಜೆಪ್ಪು ಮೋರ್ಗನ್ಸ್ ಪಟ್ಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಭಾನುವಾರ ಪತ್ತೆಯಾಗಿದೆ. ಈತ ಸುಮಾರು 45 ವರ್ಷ ವಯಸ್ಸಿನವನಾಗಿದ್ದು, ಚೌಕುಳಿ ಲುಂಗಿ, ಅಂಗಿ ಧರಿಸಿದ್ದು, ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗಾಂಜಾ ವಶ, ಆರೋಪಿ ಸೆರೆ
ಮಂಗಳೂರು: ನರಿಂಗಾನದ ತೌಡುಗೋಳಿ ಕ್ರಾಸ್ನಲ್ಲಿ ಅಕ್ರಮ ಗಾಂಜಾ ಹೊಂದಿದ ಆಫೀಸ್(18) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ ಬಗ್ಗೆ ಭಾನುವಾರ ವರದಿಯಾಗಿದೆ. ಕೂಲಿ ಕೆಲಸದ ಈತ ಕೇರಳದಿಂದ ಅಕ್ರಮವಾಗಿ ಗಾಂಜಾ ಪ್ಯಾಕೆಟ್ ತರಿಸಿ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ. ಬಂಧಿತನಿಂದ ರು. 3 ಸಾವಿರ ಮೌಲ್ಯದ 200 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ನೀರು ಪಾಲು
ಕಾರ್ಕಳ: ಮಾಳ ಗ್ರಾಮದ ಮಚ್ಚೊಟ್ಟು ಸೇತುವೆ ಬಳಿಯ ಸುಳಿಗುಂಡಿ ಹೊಳೆಗೆ ಈಜಲು ಹೋದ ಪ್ರಕಾಶ್ (17) ಎಂಬವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಸ್ನೇಹಿತ ಪ್ರದೀಪ್ ನೀಡಿದ ದೂರಿನಂತೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಎತ್ತಿನಹೊಳೆ, ನೇತ್ರಾವತಿ ತಿರುವು ಯೋಜನೆ ಪ್ರತ್ಯೇಕ'
ಮಂಗಳೂರು: ಎತ್ತಿನಹೊಳೆ ಯೋಜನೆ ಎಂದರೆ 'ನೇತ್ರಾವತಿ ನದಿ ತಿರುವು' ಅಲ್ಲ. ಅದು ಬೇರೆ, ಇದು ಬೇರೆಯೇ, ಹಾಗಾಗಿ ಎತ್ತಿನಹೊಳೆ ಯೋಜನೆ ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ನೈಸರ್ಗಿಕ ಅನಿಲ ಮತ್ತು ಪರಿಸರ ಸಚಿವ ಡಾ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಭಾನುವಾರ ಮಂಗಳೂರಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಿದೆ. ಯೋಜನೆಗೆ ಒಪ್ಪಿಗೆಯೂ ಸಿಕ್ಕಿದೆ. ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಅನುಮತಿ ಪಡೆಯಲಾಗಿದೆ. ನೇತ್ರಾವತಿ ತಿರುವು ಯೋಜನೆ ಅನುಷ್ಠಾನ ಬಗ್ಗೆ ನೀರಾವರಿ ತಜ್ಞ ಡಾ.ಪರಮಶಿವಯ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಪರಿಸರ ತಜ್ಞರ ಜತೆ ಸಮಾಲೋಚನೆ ನಡೆಸಿಯೇ ಎತ್ತಿನಹೊಳೆ ಯೋಜನೆ ಜಾರಿಗೆ ಮುಂದಾಗಿದ್ದರು ಎಂಬುದನ್ನು ಮೊಯ್ಲಿ ಸ್ಪಷ್ಟಪಡಿಸಿದರು. ಎತ್ತಿನಹೊಳೆ ಯೋಜನೆಗೆ ದ.ಕ.ಜಿಲ್ಲೆಯ ಕಾಂಗ್ರೆಸಿಗರ ವಿರೋಧ ಕುರಿತ ಪ್ರಶ್ನೆಗೆ ಉತ್ತರಿಸಿದ ಮೊಯ್ಲಿ, ಇದು ನೇತ್ರಾವತಿ ತಿರುವು ಯೋಜನೆ ಖಂಡಿತ ಅಲ್ಲ ಎಂದು ಒತ್ತಿ ಹೇಳಿದರು.
ಆಧಾರ್ ಕಡ್ಡಾಯ: ಅಡುಗೆ ಅನಿಲ ಸಬ್ಸಿಡಿಗೆ ಆಧಾರ್ ಕಡ್ಡಾಯ. ಈಗಾಗಲೇ ಇದನ್ನು ಸ್ಪಷ್ಟಪಡಿಸಲಾಗಿದೆ. ಈ ಬಗ್ಗೆ ಗೊಂದಲದ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಸಬ್ಸಿಡಿ ಸಿಲಿಂಡರ್ 12ಕ್ಕೇರಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ
ಮೂಡುಬಿದಿರೆ: ಮುಂದಿನ ವಾರ ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್ ಸಂಖ್ಯೆನ್ನು ವಾರ್ಷಿಕ 9ರಿಂದ 12ಕ್ಕೇರಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಮೊಯ್ಲಿ ಹೇಳಿದ್ದಾರೆ.
ಪೆಟ್ರೋಕೆಮಿಕಲ್ಸ್ ಹೂಡಿಕೆಗೆ ರೋಡ್ಶೋ: ಮೊಯ್ಲಿ
ಮಂಗಳೂರು: ಮಂಗಳೂರಿನ ಪೆಟ್ರೋ ಕೆಮಿಕಲ್ಸ್ ಉದ್ದಿಮೆಗೆ ರು. 2 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಮುಂಬೈನಲ್ಲಿ ಶೀಘ್ರವೇ ರೋಡ್ಶೋ ನಡೆಸಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪರಿಸರ ಸಚಿವ ಡಾ.ವೀರಪ್ಪ ಮೊಯ್ಲಿ ಹೇಳಿದ್ದಾರೆ. ಮಂಗಳೂರಿನ ಬಿಷಪ್ ಹೌಸ್ನಲ್ಲಿ ಭಾನುವಾರ ಕೆಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ-ರಚನಾ ವತಿಯಿಂದ ಏಪ್ರಿಲ್ನಲ್ಲಿ ಮಂಗಳೂರಿನಲ್ಲಿ ನಡೆಯುವ ವಿಚಾರ ಸಂಕಿರಣ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮುಂಬೈನಲ್ಲಿ ರೋಡ್ಶೋಗೆ ಸಂಬಂಧಿಸಿದ ಮ್ಯಾಪ್ ಸಚಿವಾಲಯ ಸಿದ್ಧಗೊಳಿಸುತ್ತಿದೆ. ಪೆಟ್ರೋಲಿಯಂ ಕ್ಷೇತ್ರದಲ್ಲಿ ರು. 10 ಲಕ್ಷ ಕೋಟಿ ಬಡವಾಳ ಹೂಡಿಕೆಯಷ್ಟು ಯೋಜನೆಗಳಿವೆ. ತಜ್ಞರ ಸಮಿತಿ ಯೋಜನೆಗಳಿಗೆ ಸಮ್ಮತಿ ಕೂಡ ನೀಡುತ್ತಿದೆ. ಹಾಗಾಗಿ ವಿಳಂಬವಿಲ್ಲದೆ ಸಚಿವಾಲಯ ಯೋಜನೆಗಳಿಗೆ ಅನುಮತಿ ನೀಡುತ್ತಿದೆ ಎಂದು ಸಮರ್ಥಿಸಿದರು. ಮಂಗಳೂರು ಧರ್ಮಪ್ರಾಂತ್ಯ ವಿಕಾರ್ ಜನರಲ್ ರೆ.ಫಾ.ಡೆನಿಸ್ ಮೊರಾಸ್ ಪ್ರಭು, ರಚನಾ ಅಧ್ಯಕ್ಷ ಐವನ್ ಡಿ'ಸೋಜ, ಕಾರ್ಯದರ್ಶಿ ಮಾರ್ಷಲ್ ಮೊಂತೆರೊ, ಸಂಘಟನಾ ಸಮಿತಿ ಅಧ್ಯಕ್ಷ ವಾಲ್ಟರ್ ಡಿಸೋಜ ಹಾಜರಿದ್ದರು.
ವಧೂವರ ಸಮಾವೇಶದಲ್ಲಿ ಹೃದಯಾಘಾತ: ವ್ಯಕ್ತಿ ಸಾವು
ಮಂಗಳೂರು: ನಂತೂರು ಶ್ರೀ ಭಾರತೀ ಕಾಲೇಜಿನಲ್ಲಿ ಭಾನುವಾರ ನಡೆದ ವಧೂವರರ ಸಮಾವೇಶದಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಈಶ್ವರಮಂಗಲದ ಪ್ರಸನ್ನಕೃಷ್ಣ ಜೋಯಿಸ (38) ಮೃತರು. ಸಮಾವೇಶಕ್ಕೆ ಆಗಮಿಸಿದ ಅವರು ಮಧ್ಯಾಹ್ನ ಊಟಕ್ಕೆ ಕುಳಿತಿದ್ದು, ಅಷ್ಟರಲ್ಲಿ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ ಅದಾಗಲೇ ಅವರು ಮೃತಪಟ್ಟಿದ್ದರು.
ರಸ್ತೆ ಅಪಘಾತ; ಯುವ ಎಂಜಿನಿಯರ್ ಮೃತ
ಉಡುಪಿ: ಸಾಮಾಜಿಕ ಕಾರ್ಯಕರ್ತ, ಬಹುಮುಖ ಪ್ರತಿಭೆ, ಯುವ ಎಂಜಿನಿಯರ್ ಬೆಳ್ಮಣ್ನ ವಿ. ಜಯಕೃಷ್ಣ ಉಡುಪ (33) ಶನಿವಾರ ತಡರಾತ್ರಿ ಬೆಂಗಳೂರಿನಿಂದ ಊರಿಗೆ ಬರುತ್ತಿದ್ದಾಗ ಬೇಲೂರು ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ 2001-02ನೇ ಸಾಲಿನ ಸಿವಿಲ್ ಎಂಜಿನಿಯರಿಂಗ್ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಎಂಜಿನಿಯರಿಂಗ್ ಕಲಿತು ಲೋಕೋಪಯೋಗಿ ಇಲಾಖೆಯ ನೀರಾವರಿ ವಿಭಾಗದ ಸಹಾಯಕ ಎಂಜಿನಿಯರ್ ಆಗಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ತಾಯಿ, ಪತ್ನಿ, ಪುತ್ರಿ ಇದ್ದಾರೆ.