ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪೊಲೀಸ್ ಸರ್ಪಗಾವಲಲ್ಲಿ ಅನಧಿಕೃತ ವೃತ್ತ ತೆರವು

Mainashree
Updated On : 21 Jan 2014, 11:55 am

ಸುಳ್ಯ: ಸುಳ್ಯದ ನಾವೂರಿನಲ್ಲಿ ಸ್ಥಾಪನೆಗೊಂಡು ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ವೃತ್ತವನ್ನು ಸೋಮವಾರ ನಸುಕಿನ ವೇಳೆ ಭಾರಿ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಗಿದೆ. ಇದನ್ನು ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ.
ಈದ್ ಮಿಲಾದ್‌ನಂದು ಇಲ್ಲಿ ಟಿಪ್ಪು ವೃತ್ತ ನಿರ್ಮಾಣಗೊಂಡಿತ್ತು. ಈ ಅನಧಿವೃತ ವೃತ್ತ ತೆರವುಗೊಳಿಸಬೇಕೆಂದು ಬಿಜೆಪಿ ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು.  ಈ ವೃತ್ತ ತೆರವುಗೊಳಿಸದೆ ಯಥಾಸ್ಥಿತಿಯಲ್ಲಿ ಉಳಿಸಬೇಕು, ಅನಧಿಕೃತ ಎನ್ನುವ ಕಾರಣಕ್ಕೆ ತರೆವುಗೊಳಿಸುವುದಿದ್ದರೆ ಎಲ್ಲಾ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಬೇಕೆಂದು ನಾಗರಿಕ ಹಿತರಕ್ಷಣಾ ಸಮಿತಿ ನ.ಪಂ.ಗೆ ಮನವಿ ಸಲ್ಲಿಸಿತ್ತು. ಭಾನುವಾರ ತಹಸೀಲ್ದಾರ್ ಡಾ. ಔದ್ರಾಮ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲೂ ಒಮ್ಮತ ವ್ಯಕ್ತವಾಗಿರಲಿಲ್ಲ.
ತೆರವು ಕಾರ್ಯಾಚರಣೆ: ಸೋಮವಾರ ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಭಾರಿ ಬಂದೋಬಸ್ತಿನೊಂದಿಗೆ ನ.ಪಂ. ಸಿಬ್ಬಂದಿ ವೃತ್ತ ತೆರವುಗೊಳಿಸಿದರು. ತಹಸೀಲ್ದಾರ್ ಡಾ. ಔದ್ರಾಮ, ನ.ಪಂ. ಮುಖ್ಯಾಧಿಕಾರಿ ರೋಹಿತಾಕ್ಷ, ಪುತ್ತೂರು ಡಿವೈಎಸ್ಪಿ ಎಚ್.ಡಿ.ಮೆಂಡೋನ್ಸಾ, ಮೂವರು ಸರ್ಕಲ್ ಇನ್‌ಸ್ಪೆಕ್ಟರ್‌ಗಳು,  ಮೂವರು ಎಸ್.ಐ.ಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯವರು, ಪುತ್ತೂರು, ಕಡಬ, ಸುಬ್ರಹ್ಮಣ್ಯ ಹಾಗೂ ಸುಳ್ಯ ಠಾಣೆಗಳ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು. ಈ ಸ್ಥಳದಲ್ಲಿ ಪೊಲೀಸ್ ಕಾವಲು ಮುಂದುವರಿದಿದೆ.
ಪ್ರತಿಭಟನೆ: ನಾವೂರಿನಲ್ಲಿ ಸ್ಥಾಪಿಸಲಾದ ಟಿಪ್ಪು ಸುಲ್ತಾನ್ ವೃತ್ತವನ್ನು ತೆರವುಗೊಳಿಸಿದ್ದನ್ನು ಖಂಡಿಸಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸುಳ್ಯ ನಗರ ಪಂಚಾಯಿತಿ ಎದುರು ಪ್ರತಿಭಟನೆ ನಡೆಯಿತು.
ಎಸ್.ಡಿ.ಪಿ.ಐ. ಮತ್ತು ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ನ.ಪಂ. ಎದುರು ಜಮಾಯಿಸಿ ಘೋಷಣೆ ಕೂಗತೊಡಗಿದರು. ಸ್ವಲ್ಪ ಹೊತ್ತಿನಲ್ಲಿ ನ.ಪಂ. ಆಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರ್ ಡಾ. ಔದ್ರಾಮ ಸ್ಥಳಕ್ಕೆ ಬಂದರು. ಈ ವೇಳೆ ಅವರನ್ನು ತರಾಟೆಗೆ ತೆಗೆದುಕೊಂಡ ಮುಖಂಡರು, ನಿನ್ನೆ ನೀವು ಕರೆದ ಶಾಂತಿ ಸಭೆಗೆ ಬಂದು ಶಾಂತಿ ಕಾಪಾಡುವುದಾಗಿ ಎಲ್ಲರು ಭರವಸೆ ನೀಡಿದ ಬಳಿಕವೂ ರಾತ್ರೋ ರಾತ್ರಿ ವೃತ್ತ ತೆರವುಗೊಳಿಸುವ ಅಗತ್ಯ ಏನಿತ್ತು? ಇದರ ಹಿಂದೆ ಯಾರ ಒತ್ತಡವಿದೆ? ಎಂದು ಪ್ರಶ್ನಿಸತೊಡಗಿದರು.
ತಾನು ಕಾನೂನಿನ ಪ್ರಕಾರ ಇದನ್ನು ಮಾಡಿರುವುದಾಗಿ ತಹಸೀಲ್ದಾರ್ ಹೇಳಿದಾಗ, ಹಾಗಾದರೆ ಎಲ್ಲಾ ಅನಧಿಕೃತ ನಿರ್ಮಾಣಗಳನ್ನು ಕೂಡಾ ಇದೇ ಕಾನೂನಿನಲ್ಲಿ ತೆರವುಗೊಳಿಸಿ ಎಂದು ಮುಖಂಡರು ಆಗ್ರಹಿಸಿದರು. ಈ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು. ಇದನ್ನು ಲಿಖಿತವಾಗಿ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದಾಗ ಲಿಖಿತವಾಗಿ ನೀಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.
48 ಗಂಟೆ ಗಡುವು: ಕಾನೂನು ಎಲ್ಲರಿಗೂ ಒಂದೇ. ಭರವಸೆ ನೀಡಿದಂತೆ 48 ಗಂಟೆಗಳ ಒಳಗಾಗಿ ನಗರದ ಎಲ್ಲಾ ಅನಧಿಕೃತ ನಿರ್ಮಾಣ ತೆಗೆಯಬೇಕು. ಅದಾಗದಿದ್ದರೆ ಈಗ ತೆರವುಗೊಳಿಸಿದ ವೃತ್ತ ಅಲ್ಲೇ ಮರುಸ್ಥಾಪಿಸಬೇಕು. ಈ ಕ್ರಮಗಳು ಆಗದಿದ್ದಲ್ಲಿ ನಾವೇ ವೃತ್ತ ಮರು ಸ್ಥಾಪಿಸುತ್ತೇವೆ. ಪೊಲೀಸ್ ಬಲದಿಂದ ನಮ್ಮನ್ನು ನಿಯಂತ್ರಿಸಿ ಅಶಾಂತಿ ಉಂಟಾದರೆ ಆಡಳಿತವೇ ಹೊಣೆಯಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement