ಬಾಲಕಿಗೆ ಬಸ್‌ನಲ್ಲಿ ದೈಹಿಕ ಕಿರುಕುಳ: ಶಿರ್ವದಲ್ಲಿ ಘರ್ಷಣೆ
ಉಡುಪಿ: ಉಡುಪಿಯಲ್ಲಿ ನಡೆದ ಫೇಸ್‌ಬುಕ್‌ನಲ್ಲಿ ಅಶ್ಲೀಲ ಫೋಟೊ ಹಂಚಿದ ಪ್ರಕರಣದಲ್ಲಿ ಕೋಮುಸಾಮರಸ್ಯಕ್ಕೆ ಧಕ್ಕೆಯಾದ ಘಟನೆಯ ಕಾವು ಇನ್ನೂ ತಣ್ಣಗಾಗಿಲ್ಲ. ಈ ನಡುವೆ, ಭಾನುವಾರ ಬಾಲಕಿಯೊಬ್ಬಳನ್ನು ಮುದುಕ ದೈಹಿಕ ಕಿರುಕುಳ ನೀಡಿದ ಘಟನೆ ಶಿರ್ವದಲ್ಲಿ ನಡೆದಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಸೋಮವಾರ ಬಸ್ ಸಿಬ್ಬಂದಿ ಹೊಡೆದಾಡಿಕೊಂಡು, ಕೋಮು ಸಾಮರಸ್ಯ ಇನ್ನಷ್ಟು ಕದಡಿದೆ. ಶಿರ್ವ ಪೇಟೆಯಲ್ಲೀಗ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದೆ.
ಘಟನೆ ಹಿನ್ನೆಲೆ: ಭಾನುವಾರ ಸಂಜೆ ಮೂಡುಬೆಳ್ಳೆಯ ಸೇಂಟ್ ಲಾರೆನ್ಸ್ ಪ.ಪೂ.ಕಾಲೇಜಿನ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಶಿರ್ವದ
ಬೂತಬೆಟ್ಟು ಎಂಬಲ್ಲಿನ ನಿವಾಸಿ ಶಮೀ ಅಬ್ದುಲ್ಲಾ ಖಾದರ್ (55) ಎಂಬಾತ ದೈಹಿಕ ಕಿರುಕುಳ ನೀಡಿದ ಎನ್ನಲಾಗಿದೆ.
ವಿದ್ಯಾರ್ಥಿನಿಯ ತಂದೆ ಕೂಡ ಬಸ್ಸಿನಲ್ಲಿಯೇ ಇದ್ದು, ಅವರು ಬಸ್ಸಿನ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ, ಬಸ್ಸಿನ ಸಿಬ್ಬಂದಿ ಆರೋಪಿಯನ್ನು ಬಸ್ಸಿನಲ್ಲಿಯೇ ಚೆನ್ನಾಗಿ ತದುಕಿದಾಗ, ಧರ್ಮದೇಟು ತಿಂದ ಆರೋಪಿ ಅರ್ಧದಲ್ಲಿಯೇ ಬಸ್ಸಿಳಿದು ಪರಾರಿಯಾಗಿದ್ದ.
ನಂತರ ವಿದ್ಯಾರ್ಥಿನಿಯ ಹೆತ್ತವರು ಹಿಂದೂ ಸಂಘಟನೆಗಳ ನಾಯಕರೊಂದಿಗೆ ತೆರಳಿ ಶಿರ್ವ ಠಾಣೆಗೆ ದೂರು ನೀಡಿದ್ದರು. ಅದರಂತೆ ಆರೋಪಿಯನ್ನು ಶಿರ್ವ ವೃತ್ತ ನಿರೀಕ್ಷಕ ಸುನಿಲ್ ನಾಯಕ್ ತಕ್ಷಣ ಬಂಧಿಸಿದ್ದಾರೆ. ಈ ಕಿರುಕುಳ ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಸೋಮವಾರ ಶಿರ್ವ ಬಂದ್‌ಗೆ ಕರೆ ನೀಡಿದ್ದು, ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯಲಿಲ್ಲ, ಆಟೋ-ಬಸ್ ಸಂಚಾರ ಕೂಡ ಸ್ಥಗಿತಗೊಂಡಿತ್ತು.
ಶಿರ್ವ ಸೇಂಟ್ ಮೇರಿಸ್ ಮತ್ತು ಎಸ್.ಎಂ.ಆರ್.ಎಸ್. ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದರು. ಪೇಟೆಯಲ್ಲಿ ನಡೆದ ಪ್ರತಿಭಟನಾ ಸಭೆ ಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಬಸ್ ಸಿಬ್ಬಂದಿ ಹಲ್ಲೆ: ಈ ಮಧ್ಯೆ ಈ ಚುಡಾವಣೆ ಘಟನೆಗೆ ಪ್ರತಿಕ್ರಿಯೆಯಾಗಿ ಶಿರ್ವ ಮಸೀದಿಯ ಬಳಿ ಒಂದು ಬಸ್ಸಿನ ಸಿಬ್ಬಂದಿ ಮೇಲೆ ಇನ್ನೊಂದು ಬಸ್ಸಿನ ಸಿಬ್ಬಂದಿ ಹಲ್ಲೆ ನಡೆಸಿದರು. ಏಟು ತಿಂದ ಬಸ್ ಸಿಬ್ಬಂದಿ ಅಲ್ಲಿನ ಮಸೀದಿಗೆ ತೆರಳಿ ವಿಷಯವನ್ನು ತಿಳಿಸಿದ್ದಾರೆ. ವಿಷಯ ತಿಳಿಯುತ್ತಲೇ ಮಸೀದಿಯಲ್ಲಿಯೂ ಒಂದಷ್ಟು ಜನರು ಜಮಾಯಿಸಿದರು, ಇತ್ತ ರಸ್ತೆಯಲ್ಲಿ ಇನ್ನೊಂದು ಕೋಮಿನ ಜನರು ಸೇರಿದರು. ಇದು ವಿಕೋಪಕ್ಕೆ ತಿರುಗುವ ಮೊದಲೇ ಪೊಲೀಸರು ಸ್ಥಳಕ್ಕಾಗಮಿಸಿ ಲಾಠಿ ಚಾರ್ಜ್ ಮಾಡುವುದಾಗಿ ಎಚ್ಚರಿಸಿ ಉಭಯ ಕೋಮಿನ ಜನರನ್ನು ಚದುರಿಸಿದ್ದಾರೆ.
ಬಿಗಿ ಭದ್ರತೆ: ಪರಿಸ್ಥಿತಿ ಹತೋಟಿಯಲ್ಲಿಡಲು ಶಿರ್ವದಲ್ಲಿ ಸೋಮವಾರ ಬೆಳಗ್ಗಿನಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸ್ ಅಧಿಕಾರಿಗಳಾದ ಸುನಿಲ್ ಕುಮಾರ್, ಕಾರ್ಕಳ ಡಿವೈಎಸ್ಪಿ ಅಣ್ಣಮಲೈ, ಉಡುಪಿ ವೃತ್ತ ನಿರೀಕ್ಷಕ ಮಾರುತಿ ನಾಯಕ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ ನಾಯಕ್ ಸ್ಥಳದಲ್ಲೇ ಠಿಕಾಣಿ ಹೂಡಿದ್ದರು.
ಆರೋಪಿ ಶಮಿ ಅಬ್ದುಲ್ ಖಾದರ್ ಮೇಲೆ ಸೆಕ್ಷನ್ 354ಎ (ಲೈಂಗಿಕ ದೌರ್ಜನ್ಯ) ಮತ್ತು ಪೋಸ್ಕೋ ಆಕ್ಟ್ 2012ರ ಸೆಕ್ಷನ್ 6 ಮತ್ತು 7 (ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ)ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಸೋಮವಾರ ಬೆಳಗ್ಗೆ ಉಡುಪಿಯ ಪ್ರಧಾನ ಸೆಶನ್ಸ್ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಫೆ.3ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋಮವಾರದ ಪ್ರತಿಭಟನೆಯಲ್ಲಿ ಹಿಂದೂ ಪರ ಸಂಘಟನೆಗಳ ನಾಯಕರಾದ ಮಟ್ಟಾರು ರತ್ನಾಕರ ಶೆಟ್ಟಿ, ವಿ.ಹಿಂ.ಪ. ಮುಖಂಡ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಜರಂಗದಳದ ಸುನಿಲ್ ಕುಮಾರ್ ನೇತೃತ್ವ ವಹಿಸಿದ್ದರು.