ಗಲ್ಲು ಕುಣಿಕೆಯಿಂದ ತಪ್ಪಿಸಿಕೊಂಡ ಹಂತಕ ಪ್ರವೀಣ್
ಮಂಗಳೂರು: ಅತ್ತೆ ಸಹಿತ ನಾಲ್ವರು ಸಂಬಂಧಿಕರನ್ನು ಸಾಮೂಹಿಕವಾಗಿ ಕೊಲೆ ಮಾಡಿ ಗಲ್ಲು ಶಿಕ್ಷೆಗೆ ಗುರಿಯಾಗಿ ಈಗ ಜೀವಾವಧಿ ಶಿಕ್ಷೆಗೆ ಕಾರಣನಾದ ಪ್ರವೀಣ್ ಮೂಲತಃ ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ.
ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ಈತ ವಾಸವಿದ್ದುದು ವಾಮಂಜೂರಿನಲ್ಲಿದ್ದ ಅತ್ತೆ ಅಪ್ಪಿ ಶೇರಿಗಾರ್ತಿ ಮನೆಯಲ್ಲಿ. ಅಲ್ಲಿ ಅತ್ತೆ, ಅವರ ಮಗ ಗೋವಿಂದ, ಈತನ ತಂಗಿ ಶಕುಂತಳಾ, ಈಕೆಯ ಪುತ್ರಿ ದೀಪಿಕಾ ಇದ್ದರು. ವಿದೇಶದಿಂದ ಬಂದು ಹೋಗಿದ್ದ ಶಕುಂತಳಾ ಪತಿ ಹೇರಳ ಹಣ ತಂದಿರುವ ಶಂಕೆಯಲ್ಲಿ 1994 ಫೆ.23ರಂದು ಪ್ರವೀಣ್, ಈ ನಾಲ್ವರನ್ನು ಕೊಲೆ ಮಾಡಿದ್ದ. ಕೊಲೆ ನಡೆಸಿದ ಮೂರು ದಿನ ಬಳಿಕ ರೌಡಿ ನಿಗ್ರಹದಳ ಪೊಲೀಸರು ಈತನನ್ನು ಬಂಧಿಸಿದ್ದರು. ಆದರೆ ವಿಚಾರಣೆ ಹಂತದಲ್ಲಿ ಪ್ರವೀಣ್ ಪರಾರಿಯಾಗಿದ್ದ. ಒಂದು ವರ್ಷ ಬಳಿಕ ರೌಡಿನಿಗ್ರಹದಳ ಪೊಲೀಸರು ಈತನನ್ನು ಗೋವಾದಲ್ಲಿ ಬಂಧಿಸುವಲ್ಲಿ ಸಫಲರಾದರು. ಜಿಲ್ಲಾ ಪ್ರಧಾನ ನ್ಯಾಯಾಲಯ ಈತನಿಗೆ ಮರಣ ದಂಡನೆ ವಿಧಿಸಿತ್ತು. ಇದನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. 2003 ಅ.15ರಂದು ಸುಪ್ರೀಂ ಕೋರ್ಟ್ ಕೂಡ ಗಲ್ಲು ಶಿಕ್ಷೆಯನ್ನು ಕಾಯಂ ಮಾಡಿತ್ತು. ಪ್ರಸ್ತುತ ಹಿಂಡಲಗಾ ಜೈಲಿನಲ್ಲಿದ್ದಾನೆ.