ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವೃತ್ತ ವಿವಾದ: ಮುಂದುವರಿದ ಭದ್ರತೆ

Mainashree
Updated On : 22 Jan 2014, 2:20 am

ಸುಳ್ಯ:  ಸುಳ್ಯದ ನಾವೂರಿನಲ್ಲಿ ನಿರ್ಮಾಣಗೊಂಡು ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಸುಲ್ತಾನ್ ಹೆಸರಿನ ವೃತ್ತ ತೆರವುಗೊಂಡಿದ್ದರೂ ವಿವಾದದ ಬೆಂಕಿ ಆರಿಲ್ಲ. ಸ್ಥಳದಲ್ಲಿ ಬಿಗಿ ಪೊಲೀಸ್ ಕಾವಲು ಮುಂದುವರಿದಿದೆ.
ಕಾನೂನು ಗಾಳಿಗೆ ತೂರಿ ನ.ಪಂ. ರಾತ್ರಿ ವೇಳೆ ವೃತ್ತ ತೆರವುಗೊಳಿಸಿದ್ದು, ನಗರದಲ್ಲಿರುವ ಇನ್ನಷ್ಟು ಅನಧಿಕೃತ ವೃತ್ತಗಳನ್ನು ತೆರವುಗೊಳಿಸಬೇಕು ಎಂದು ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿ ಹಾಗೂ ಎಸ್‌ಡಿಪಿಐ ಮುಖಂಡ ಅಬ್ದುಲ್ ಕಲಾಂ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಿ ಸಭೆ ನಡೆಸಿದರೂ, ಯಾರದೋ ಒತ್ತಡಕ್ಕೆ ಮಣಿದು ರಾತ್ರಿ ವೇಳೆ ಪೊಲೀಸ್ ಬಂದೋಬಸ್ತ್‌ನಲ್ಲಿ ವೃತ್ತ ತೆರವುಗೊಳಿಸಿದ್ದು ಯಾಕೆ, 48 ಗಂಟೆಯೊಳಗೆ ನ.ಪಂ. ವ್ಯಾಪ್ತಿಯಲ್ಲಿರುವ ಅನಧಿಕೃತ ವೃತ್ತಗಳನ್ನು ತೆರವುಗೊಳಿಸಬೇಕು. ಇಲ್ಲವೇ ಟಿಪ್ಪು ವೃತ್ತವನ್ನು ಪುನರ್ ಸ್ಥಾಪಿಸಿಕೊಡಬೇಕು. ಇಲ್ಲವಾದರೆ ನಾವೇ ಅಲ್ಲಿ ಮತ್ತೆ ಟಿಪ್ಪು ವೃತ್ತ ನಿರ್ಮಾಣ ಮಾಡುತ್ತೇವೆ. ಮುಂದೇ ಯಾವುದೇ ಅನಾಹುತವಾದಲ್ಲಿ ತಾಲೂಕು ದಂಡಾಧಿಕಾರಿ ಮತ್ತು ನ.ಪಂ. ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.
ಕಾನೂನು ಕ್ರಮಕ್ಕೆ ಬಿಜೆಪಿ ಆಗ್ರಹ: ವೃತ್ತ ನಿರ್ಮಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವವರ ವಿರುದ್ಧ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸುಳ್ಯ ನಗರ ಬಿಜೆಪಿ ಮತ್ತು ನ.ಪಂ. ಬಿಜೆಪಿ ಬೆಂಬಲಿತ ಸದಸ್ಯರು ಆಗ್ರಹಿಸಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ, ನ.ಪಂ. ಸದಸ್ಯ ಎನ್.ಎ. ರಾಮಚಂದ್ರ ನಾವೂರು, ಟಿಪ್ಪು ಸುಲ್ತಾನ್ ಹೆಸರನ್ನು ಯಾವುದೇ ನಗರದ ಯಾವುದೇ ರಸ್ತೆಗೆ ಅಥವಾ ವೃತ್ತಕ್ಕೆ ಇಡುವುದಕ್ಕೆ ನಮ್ಮ ವಿರೋಧವಿದೆ. ಯಾವುದೇ ಪರವಾನಗಿ ಇಲ್ಲದೆ ನ.ಪಂ. ನಿರ್ಣಯಕ್ಕೆ ವಿರುದ್ಧವಾಗಿ ಈ ವೃತ್ತ ನಿರ್ಮಾಣಗೊಂಡಿತ್ತು ಎಂದರು.
ಉತ್ತರ ಕೊಡಲು ಸಿದ್ಧ- ಬಜರಂಗದಳ: ಹಿಂದೂ ಆರಾಧನಾಲಯ ಮತ್ತು ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡಿದ ಮತಾಂಧನೊಬ್ಬನ ವೃತ್ತವನ್ನು ಸುಳ್ಯದಲ್ಲಿ ನಿರ್ಮಿಸುವ ಮೂಲಕ ಅನಾವಶ್ಯಕವಾಗಿ ಶಾಂತಿ ಕದಡುವ ಯತ್ನವನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಈ ಪ್ರವೃತ್ತಿ ಮುಂದುವರಿದರೆ ಅದಕ್ಕೆ ತಕ್ಕ ಉತ್ತರ ನೀಡಲು ನಾವು ಸಿದ್ಧರಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮುಖಂಡರು ತಿಳಿಸಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಜರಂಗದಳದ ಜಿಲ್ಲಾ ಸಹ ಸಂಚಾಲಕ ಮಹೇಶ್ ರೈ ಮೇನಾಲ, ಈ ಕೃತ್ಯದ ಹಿಂದೆ ವ್ಯವಸ್ಥಿತ ಉದ್ದೇಶವಿದೆ. ಇದನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ. ಇವರೆಲ್ಲರ ಟಾರ್ಗೆಟ್ ಚೆನ್ನಕೇಶವ ದೇವಸ್ಥಾನ. ಈ ದೇವಸ್ಥಾನದ ಕಟ್ಟೆ ತೆರವುಗೊಳಿಸಬೇಕು ಎಂಬ ದುರುದ್ದೇಶದಿಂದಲೇ ಟಿಪ್ಪು ಸುಲ್ತಾನ್ ವೃತ್ತ ನಿರ್ಮಿಸಿ ಗೊಂದಲ ಮೂಡಿಸುತ್ತಿದ್ದಾರೆ. 48 ಗಂಟೆ ಅಲ್ಲ ಅದಕ್ಕೆ 48 ಗಂಟೆ ಸೇರಿಸಿ ಗಡುವು ನೀಡುತ್ತೇವೆ. ತಾಕತ್ತಿದ್ದರೆ ಚೆನ್ನಕೇಶವ ದೇವಾಲಯದ ಕಟ್ಟೆಯನ್ನು ಅವರು ತೆರವುಗೊಳಿಸಿ ನೋಡಲಿ. ಅದಕ್ಕೆ ಹಿಂದೂ ಸಮಾಜ ಯಾವ ರೀತಿ ಉತ್ತರ ಕೊಡುತ್ತದೆ ಎಂದು ಗೊತ್ತಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement