ಟಿಪ್ಪು ವೃತ್ತ ವಿವಾದ; ಸಂಧಾನಕ್ಕೆ ಪೊಲೀಸ್ ಯತ್ನ
ಸುಳ್ಯ: ನಾವೂರಿನಲ್ಲಿ ನಿರ್ಮಾಣಗೊಂಡು ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ವೃತ್ತ ತೆರವು ಬಳಿಕ ನೆಲೆಸಿದ್ದ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಿಂದ ಪೊಲೀಸ್ ಇಲಾಖೆ ಮತ್ತೆ ಶಾಂತಿ ಸಭೆ ನಡೆಸಿ ವಿವಾದ ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಸೂತ್ರ ಅನುಸರಿಸಿದೆ.
ವೃತ್ತ ತೆರವು ಬಳಿಕ ಪ್ರತಿಭಟನೆ ನಡೆಸಿದ್ದ ನಾಗರಿಕ ಹಿತರಕ್ಷಣಾ ಸಮಿತಿ, ಮುಂದಿನ 48 ಗಂಟೆಯೊಳಗೆ ಸುಳ್ಯದ ಇತರ ಅನಧಿಕೃತ ನಿರ್ಮಾಣಗಳನ್ನು ಕೂಡಾ ತೆಗೆಯಬೇಕು, ಅಲ್ಲದಿದ್ದರೆ ತೆರವುಗೊಳಿಸಿದ್ದ ಟಿಪ್ಪುವೃತ್ತ ಮರು ನಿರ್ಮಾಣ ಮಾಡಿಕೊಡಬೇಕು. ಅದೂ ಆಗದಿದ್ದರೆ ನಾವೇ ಆ ವೃತ್ತ ಮತ್ತೆ ನಿರ್ಮಿಸುವುದಾಗಿ ಹೇಳಿಕೊಂಡಿತ್ತು. ಈ ಹೇಳಿಕೆ ವಿರುದ್ಧ ಬಿಜೆಪಿ, ಬಜರಂಗದಳ ಹಾಗೂ ವಿಶ್ವ ಹಿಂದೂಪರಿಷತ್‌ನವರು ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದರು.
ಈ ಎಲ್ಲಾ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಇತ್ತಂಡದವರನ್ನು ಕರೆಸಿ ಸಭೆ ನಡೆಸಿತು. ಡಿವೈಎಸ್ಪಿ ಎಚ್.ಡಿ.ಮೆಂಡೋನ್ಸಾ, ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಸತೀಶ್, ಎಸ್.ಐ. ರವಿ ಬಿ.ಎಸ್. , ನಾಗರಿಕ ಹಿತರಕ್ಷಣಾ ವೇದಿಕೆ ಮುಖಂಡರಾದ ಅಬ್ದುಲ್ ಕಲಾಂ, ಸತ್ತಾರ್ ಸಂಗಂ, ಕೆ.ಎಸ್.ಉಮ್ಮರ್, ಬಜರಂಗದಳ ಜಿಲ್ಲಾ ಸಹಸಂಚಾಲಕ ಮಹೇಶ್ ರೈ ಮೇನಾಲ, ನ.ಪಂ. ಸದಸ್ಯ ಗಿರೀಶ್ ಕಲ್ಲುಗದ್ದೆ ಸಭೆಯಲ್ಲಿದ್ದರು. ವೃತ್ತ ತೆರವುಗೊಳಿಸಿ 48 ಗಂಟೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಮ್ಮ ಹಳೆಯ ಬೇಡಿಕೆ ಈಡೇರಿಸಬೇಕೆಂದು ನಾಗರಿಕ ಸಮಿತಿಯವರು ಹೇಳಿದರೆ, ಬಜರಂಗದಳದವರು ಅದನ್ನು ವಿರೋಧಿಸಿದರು.
ಎ.ಪಿ.ಎಂ.ಸಿ. ಬಳಿ ಅನಧಿಕೃತವಾಗಿ ನಿರ್ಮಿಸಲಾದ ಚೆನ್ನಕೇಶವ ವೃತ್ತ ತೆರವುಗೊಳಿಸಬೇಕೆಂಬ ಪ್ರಸ್ತಾಪ ಸಭೆಯಲ್ಲಿ ಬಂತು. ಅದನ್ನು ಅಧಿಕಾರಿಗಳು ತೆರವುಗೊಳಿಸುವ ಬದಲು ಕಟ್ಟಿದವರೇ ತೆಗೆಸಲು ಸಿದ್ಧ ಎಂಬ ಉತ್ತರವೂ ಬಂತು. ಅದಕ್ಕೊಪ್ಪದ ನಾಗರಿಕ ಸಮಿತಿಯವರು ನಮ್ಮ ವೃತ್ತವನ್ನು ಅಧಿಕಾರಿಗಳು ತೆರವುಗೊಳಿಸಿದ ಹಾಗೇ ಅದನ್ನು ಕೂಡಾ ತೆರವು ಮಾಡಬೇಕು ಎಂದರು. ಈ ಬಗ್ಗೆ ಸ್ಪಷ್ಟ ನಿರ್ಧಾರ ಸಭೆಯಿಂದ ಬಾರದಿದ್ದರೂ ಆ ವೃತ್ತ ತೆರವುಗೊಳಿಸುವ ಮೂಲಕ ಉದ್ವಿಗ್ನತೆ ಶಮನ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತೆಂದು ತಿಳಿದು ಬಂದಿದೆ.